Advertisement

ಇಒ ವಿರುದ್ಧ ಅಸಮಾಧಾನ: ಸಭೆಗೆ ಗೈರು

12:28 PM Sep 08, 2019 | Suhan S |

ರಾಮನಗರ: ತಾಪಂ ಇಒ ಧೋರಣೆಗೆ ಬಗ್ಗೆ ಬೇಸತ್ತ ತಾಪಂ ಸದಸ್ಯರು ಶನಿವಾರ ನಡೆಯಬೇಕಿದ್ದ ತಾಪಂ ಸಾಮಾನ್ಯ ಸಭೆಗೆ ಗೈರಾಗಿದ್ದರಿಂದ ಸದರಿ ಸಭೆಯನ್ನು ಮುಂದೂಡಲ್ಪಟ್ಟಿದೆ.

Advertisement

ಶನಿವಾರ ತಾಪಂ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ತಾಪಂ ಇಒ ಅವರು ಸಹ ವೇದಿಕೆಯಲ್ಲಿದ್ದರು. ಆದರೆ, ತಾಪಂ ಚುನಾಯಿತ ಪ್ರತಿನಿಧಿಗಳೇ ಸಭೆಗೆ ಆಗಮಿಸಲಿಲ್ಲ.

ಜೆಡಿಎಸ್‌ ಸದಸ್ಯರು ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಹಾಗೂ ಇಒ ಅವರ ಧೋರಣೆಗಳಿಂದಾಗಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇನ್ನೊಂದೆಡೆ ಕಾಂಗ್ರೆಸ್‌ ಸದಸ್ಯ ಇಒ ಅವರ ವರ್ತನೆಗೆ ಬೇಸತ್ತು ಸಭೆಗೆ ಹಾಜರಾಗೋಲ್ಲ ಎಂದರು. ಕಾಂಗ್ರೆಸ್‌ ಸದಸ್ಯರ ಮನವೊಲಿಸುವಲ್ಲಿ ನಿರತರಾದ ಅಧ್ಯಕ್ಷರು ಸಹ ಸಭಾಂಗಣದ ಕಡೆಗೆ ಬರಲಿಲ್ಲ.

2 ಕೋಟಿ ರೂ. ಅನುದಾನದ ಬಗ್ಗೆ ಚರ್ಚೆಯಾಗಬೇಕಿತ್ತು: ಸಭೆಯಲ್ಲಿ ಪ್ರಮುಖವಾಗಿ ತಾಪಂಗೆ ಸರ್ಕಾರದಿಂದ ಬಂದಿರುವ 2 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿತ್ತು. 2018-19ನೇ ಸಾಲಿನ ಲಿಂಕ್‌ ಡಾಕ್ಯೂಮೆಂಟ್ ಅನುಗುಣವಾಗಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆಯಾಗಿ ಅನುಮೋದನೆ ಪಡೆಯಬೇಕಿತ್ತು. ಆದರೆ, ಚುನಾಯಿತ ಪ್ರತಿನಿಧಿಗಳು ತಾಪಂ ಇಒ ಬಾಬು ಅವರ ಬಗ್ಗೆ ಸಿಡಿಮಿಡಿಗೊಂಡಿದ್ದು, ಇಒ ಅವರ ಬದಲಾವಣೆ ಆಗದ ಹೊರತು ಸಭೆಗೆ ಹಾಜರಾಗುವುದಿಲ್ಲ ಎಂದು ಶಪಥ ಮಾಡಿದಂತಿತ್ತು. ಮಧ್ಯಾಹ್ನ ಸುಮಾರು 1.30ರ ವರೆಗೆ ಕಾದು ಕುಳಿತ ಅಧಿಕಾರಿಗಳು ನಂತರ ನಿರ್ಗಮಿಸಿದರು.

ಸಭೆಗೆ ಅಗೌರವ ತೋರಿದರೇ ಅಧ್ಯಕ್ಷರು?: ಸದಸ್ಯರು ಬರಲಿ, ಬಿಡಲಿ ಅಧ್ಯಕ್ಷರು ಸಭೆಗೆ ಹಾಜರಾಗಬೇಕಿತ್ತು. ಸಭೆಯಲ್ಲಿ ಕಾದು ಕುಳಿತಿದ್ದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಬಹುದಿತ್ತು. ಕೋರಂ ಕೊರತೆ ಇದ್ದರೆ ಸಭೆ ರದ್ದಾಗಿದೆಯೇ, ಮುಂದೂಡಲ್ಪಟ್ಟಿದೆಯೇ ಎಂಬುದನ್ನಾದರು ತಿಳಿಸಬೇಕಿತ್ತು. ಆದರೆ, ಸದಸ್ಯರೊಂದಿಗೆ ಅಧ್ಯಕ್ಷರು ಸಹ ಸಭೆಗೆ ಗೈರಾಗಿದ್ದರು ಎಂದು ಕೆಲವು ಅಧಿಕಾರಿಗಳು ಮತ್ತು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಸದಸ್ಯರ ನಿರ್ಧಾರಕ್ಕೆ ಗೌರವ: ತಾಲೂಕು ಪಂಚಾಯ್ತಿ ಇಒ ಅವರ ಬಗ್ಗೆ ಸದಸ್ಯರಲ್ಲಿ ಅಸಮಾಧಾನವಿರುವುದು ನಿಜ. ಸಾರ್ವಜನಿಕರ ಕೆಲಸ ಮತ್ತು ಕಚೇರಿ ಆಡಳಿತ ಕಾರ್ಯನಿರ್ವಹಿಸುವಲ್ಲಿ ಬೇಜವಾಬ್ದಾರಿ ತೋರಿಸುತ್ತಿರುವ ಬಗ್ಗೆ ದೂರುಗಳಿವೆ. ಸಭೆಗಳಲ್ಲಿ ಆದ ನಿರ್ಣಯಗಳನ್ನು ಜಾರಿ ಮಾಡುತ್ತಿಲ್ಲ. ಸದಸ್ಯರಿಗೆ ಗೌರವಿಸಲ್ಲ. ಸದಸ್ಯರು ಹೇಳುವ ಸಲಹೆಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಎಲ್ಲಾ ಸದಸ್ಯರು ಇಒ ಅವರ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜು ಪ್ರತಿಕ್ರಿಯಿಸಿದ್ದಾರೆ.

ಸಿಇಒ ಭೇಟಿ: ತಾಪಂ ಸದಸ್ಯರ ಒಟ್ಟಾರೆ ಅಭಿಪ್ರಾಯ ಇಒ ಅವರನ್ನು ಬದಲಾಯಿಸುವುದು. ಹೀಗಾಗಿ ತಾವು ಕೆಲವು ಸದಸ್ಯರೊಂದಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಜಯ ವಿಭವ ಸ್ವಾಮಿ ಅವರನ್ನು ಭೇಟಿ ಮಾಡಿ, ಇಒ ಅವರು ಸಾರ್ವಜನಿಕ ಕೆಲಸ ಮತ್ತು ಕಚೇರಿ ಆಡಳಿತ ಕಾರ್ಯನಿರ್ವಹಿಸದೇ ಅಸಡ್ಡೆ ಮತ್ತು ಬೇಜವಾಬ್ದಾರಿ ತೋರುತ್ತಿರುವ ಬಗ್ಗೆ ಲಿಖೀತ ಮನವಿ ನೀಡಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next