Advertisement

ಸಂಶೋಧನೆಗೆ ಬೇಕು ಅನುದಾನ

12:11 PM Jun 26, 2018 | |

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರಗಳು ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಬಯೊಕಾನ್‌ ಸಂಸ್ಥೆಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಹೇಳಿದ್ದಾರೆ.

Advertisement

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ವ್ಯಯಿಸುತ್ತಿರುವ ಹಣದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಸಂಶೋಧನೆಗಾಗಿ ಸರ್ಕಾರ ಕಡಿಮೆ ಖರ್ಚು ಮಾಡುತ್ತಿದೆ. ಈ ಪ್ರಮಾಣ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

2004-05ನೇ ಸಾಲಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ 24 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿತ್ತು. 2016-17ನೇ ಸಾಲಿನಲ್ಲಿ ಅದು 1 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಆದ್ಯತೆ ಸಿಕ್ಕಿರುವುದಕ್ಕೆ ಇದೇ ಸಾಕ್ಷಿ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಉದ್ದಿಮೆ ಅಥವಾ ಖಾಸಗಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಕಡಿಮೆಯಾಗಿದೆ ಎಂದು ಹೇಳಿದರು.

ಎರಡು ದಶಕಗಳಲ್ಲಿ ಜಿಡಿಪಿಯ ಶೇ.0.6 ರಿಂದ ಶೇ.0.7ರಷ್ಟು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಚೀನಾ, ದಕ್ಷಿಣ ಕೊರಿಯ, ಇಸ್ರೇಲ್‌ ಮೊದಲಾದ ದೇಶಗಳಿಗೆ ಹೋಲಿಸಿದರೆ ಇದು ಅತಿ ಕಡಿಮೆ. ಸರ್ಕಾರಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಘಟಿಕೋತ್ಸವದಲ್ಲಿ 50 ಚಿನ್ನದ ಪದಕ ಸೇರಿದಂತೆ ಒಟ್ಟು 856 ಅಭ್ಯರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಐಐಎಸ್‌ಸಿ ನಿರ್ದೇಶಕ ಪ್ರೊ.ಅನುರಾಗ್‌ ಕುಮಾರ್‌, ಪ್ರೊ. ರಾಮರಾವ್‌ ಮೊದಲಾದವರು ಉಪಸ್ಥಿರಿದ್ದರು.

Advertisement

ವಿಜ್ಞಾನಿಗಳಾಗಿ ಹೊರಹೊಮ್ಮಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದ್ದು, ಯುವ ವಿಜ್ಞಾನಿಗಳ ಅಗತ್ಯ ಹೆಚ್ಚಿದೆ. ವಿದೇಶಿ ಕೃತಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಟ್ಟಿಗೆ ಇಸ್ರೊ ಬೆಳೆದಿದೆ. ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನ ವಿಷಯ ಆರಿಸಿಕೊಂಡು ಯುವ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು.

ರಕ್ಷಣಾ ಸಚಿವಾಲಯದ ಅಂಗಸಂಸ್ಥೆಗಳು ನಿರ್ಮಿಸುವ ವಿಮಾನ, ಕೃತಕ ಉಪಗ್ರಹಗಳ ರಚನಾ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೇಶ ಸೇವೆ ಸಲ್ಲಿಸಬೇಕು ಎಂದು ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಸಬಿತ ಚೌಧರಿ ಸ್ಮಾರಕ ಚಿನ್ನದ ಪದಕ ಪಡೆದ ಸೌಮ್ಯಜಿತ್‌ ಬೆಹ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೊದಲಾದ ಆ್ಯಪ್‌ಗ್ಳನ್ನು ನೋಡಿದಾಗಲೇ ಬಳಸಬೇಕು ಎನಿಸುತ್ತದೆ. ಯುವಜನರಿಗೆ ಬೇಕಾದ ತಂತ್ರಾಂಶಗಳ ವಿನ್ಯಾಸ ಆಕರ್ಷಕವಾಗಿ ರೂಪಿಸಿದರೆ ಬಳಕೆದಾರರು ಹೆಚ್ಚುತ್ತಾರೆ. ವಿನ್ಯಾಸವೇ ಆ್ಯಪ್‌ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ದಿ ಇನ್‌ಸ್ಟಿಟ್ಯೂಟ್‌ ಚಿನ್ನದ ಪದಕ ಪಡೆದ ಶುಭಂ ಸುನೀಲ್‌ ರಾವ್‌ ಫ‌ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next