ಮಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿವರ್ತನೆ ಗಳು ಕ್ಷಿಪ್ರಗತಿಯಲ್ಲಿ ಘಟಿಸುತ್ತಿವೆ. ಈ ಕಾಲಘಟ್ಟದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಹೇಳಿದರು.
ಮಣಿಪಾಲ ದಂತ ವೈದ್ಯಕೀಯ ವಿದ್ಯಾಲಯವು ಉನ್ನತ ವ್ಯಾಸಂಗ ಸಂಸ್ಥೆಯ ವಿದ್ಯಾರ್ಥಿ ಸಂಶೋಧನ ವೇದಿಕೆಯ ಆಶ್ರಯದಲ್ಲಿ ಶನಿವಾರ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ “ಸ್ಟೂಡೆಂಟ್ ಕಾನ್ಫರೆನ್ಸ್ ಆಫ್ ರಿಸರ್ಚ್ ಇನ್ ಎಜುಕೇಶನ್’ (ಸ್ಕೋರ್-2) ದ್ವಿದಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಗಳು ಪ್ರಸ್ತುತ ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ. ಆದುದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಸಂಶೋಧನೆಗಳತ್ತಲೂ ಒಲವು ಹೊಂದಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾಹೆ ಸಹ ಕುಲಪತಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪೂರ್ಣಿಮಾ ಬಾಳಿಗಾ ಭಾಗವಹಿಸಿದ್ದರು.ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ| ದಿಲೀಪ್ ಜಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಲಹಾ ಮಂಡಳಿಯ ಡಾ| ರವಿಕಿರಣ ಒಂಗೋಲ್,ವಿದ್ಯಾರ್ಥಿ ಸಮಿತಿಯ ವಿದುಷಿ ಗುಪ್ತ, ಪಾವಸ್ ಶರ್ಮ ಉಪಸ್ಥಿತರಿದ್ದರು.
ನಾರಾಯಣ ಹೃದಯಾಲಯದ ಪ್ರಾಯೋಗಿಕ ಸಂಶೋಧನ ಘಟಕದ ಮುಖ್ಯಸ್ಥ ಡಾ| ಅಲೆºàನ್ ಸಿಗಮನಿ, ಕೆಎಲ್‌ಇ ದಂತ ವಿದ್ಯಾಲಯದ ಡಾ| ಪ್ರವೀಣ ಬೀರೂರ್, ಮಣಿಪಾಲದ ಡಾ| ಸಿರಾಜ್ ಎಂ., ಡಾ| ಅರುಣ್ ಶಾನಭಾಗ್ ಮತ್ತು ವಿದ್ಯಾರ್ಥಿ ಅನುಸಂಧಾನ ವೇದಿಕೆಯ ಸ್ಥಾಯಿ ಸಮಿತಿಯ ಸದಸ್ಯರಾದ ಡಾ| ಸಂಚಿತಾ ಚಂದರ್, ಡಾ| ಸಾನಾ ಚಾವ್ಲಾ ಹಾಗೂ ಡಾ| ಹುಸೈನ್ ಲೋಖಂಡವಾಲಾ ವಿವಿಧ ವಿಷಯಗಳ ಕುರಿತಾಗಿ ಉಪನ್ಯಾಸ ನೀಡಿದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
“ಸ್ಕೋರ್-2′ ಸಮಾವೇಶದಲ್ಲಿ ದೇಶದ ವಿವಿಧ ಕಾಲೇಜುಗಳಿಂದ ಆಗಮಿಸಿದ ಸುಮಾರು 500 ಮಂದಿ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಡೆಂಟಲ್ ಒಲಿಂಪಿಕ್ಸ್, ಶೈಕ್ಷಣಿಕ ವೀಡಿಯೋ ಪ್ರಸ್ತುತಿ, ಆರೋಗ್ಯ ಶಿಕ್ಷಣ ಮತ್ತಿತರ ವಿಷಯಗಳ ಬಗ್ಗೆ ವಿಚಾರಮಂಡನೆ ನಡೆಯಿತು.