Advertisement

ರಿಕ್ಷಾದಡಿ ಸಿಲುಕಿದ್ದ ತಾಯಿಯ ರಕ್ಷಿಸಿದ ಪುತ್ರಿ; ಬಾಲಕಿಯ ಸಮಯಪ್ರಜ್ಞೆಗೆ ಸಿಎಂ ಶ್ಲಾಘನೆ

01:23 AM Sep 10, 2024 | Team Udayavani |

ಕಿನ್ನಿಗೋಳಿ: ರಸ್ತೆ ದಾಟುತ್ತಿದ್ದ ತಾಯಿಗೆ ರಿಕ್ಷಾ ಢಿಕ್ಕಿಯಾಗಿ ಅದರಡಿ ಬಿದ್ದಿದ್ದಾಗ ಹತ್ತಿರದಲ್ಲಿಯೇ ಇದ್ದ ಪುತ್ರಿ, 7ನೇ ತರಗತಿಯ ವೈಭವಿ ತತ್‌ಕ್ಷಣವೇ ಧಾವಿಸಿ ಬಂದು ರಿಕ್ಷಾ ಮೇಲೆತ್ತಿ ತಾಯಿಯನ್ನು ರಕ್ಷಿಸಿದ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

ಕಿನ್ನಿಗೋಳಿಯ ರಾಮ ನಗರದಲ್ಲಿ ಟ್ಯೂಶನ್‌ಗೆ ಹೋಗಿದ್ದ ಪುತ್ರಿಯನ್ನು ಕರೆತರಲು ಬರುತ್ತಿದ್ದ ತಾಯಿ ರಸ್ತೆ ದಾಟುತ್ತಿದ್ದಂತೆ ರಿಕ್ಷಾ ಢಿಕ್ಕಿಯಾಯಿತು. ಈ ವೇಳೆ ಆಕೆ ರಿಕ್ಷಾದ ಅಡಿಯಲ್ಲಿ ಸಿಲುಕಿದ್ದು, ಎದುರಿನಲ್ಲಿದ್ದ ಪುತ್ರಿ ನೋಡ ನೋಡುತ್ತಿದ್ದಂತೆ ಘಟನೆ ಸಂಭವಿಸಿದ್ದು, ಆಕೆ ತತ್‌ಕ್ಷಣವೇ ಧಾವಿಸಿ ರಿಕ್ಷಾವನ್ನು ಮೇಲೆತ್ತಿ ತಾಯಿಯನ್ನು ರಕ್ಷಿಸಿದ್ದಳು. ಇದು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪ್ರಸ್ತುತ ತಾಯಿ ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬೆನ್ನುಮೂಳೆಗೆ ಹಾನಿಯಾಗಿದ್ದು, ಚಿಕಿತ್ಸೆಗೆ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ.

ಸಮಯಪ್ರಜ್ಞೆ, ಧೈರ್ಯಕ್ಕೆ ಮೆಚ್ಚುಗೆ
ತಾಯಿಗೆ ರಿಕ್ಷಾ ಢಿಕ್ಕಿಯಾದ ವೇಳೆ ಎದುರಿನಲ್ಲಿಯೇ ಇದ್ದ ಬಾಲಕಿ ಸ್ವಲ್ಪವೂ ಧೈರ್ಯಗುಂದದೆ ತತ್‌ಕ್ಷಣವೇ ಕಾರ್ಯಪ್ರವೃತ್ತಳಾಗಿರುವುದು ಶ್ಲಾಘನೀಯ. ಆಕೆ ಇತರರ ಸಹಾಯಕ್ಕೆ ಕಾಯದೆ ತತ್‌ಕ್ಷಣವೇ ಧಾವಿಸಿ ಹಿಂದೆ ಮುಂದೆ ನೋಡದೆ ರಿಕ್ಷಾ ಮೇಲೆತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿರುವ ಜನರು ಸುತ್ತಲೂ ನಿಂತು ಮೊಬೈಲ್‌ ಮೂಲಕ ವೀಡಿಯೋ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೇನೆ. ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್‌ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next