Advertisement

Bengaluru: ಅಕ್ರಮ ಸಂಬಂಧ ಪ್ರಶ್ನಿಸಿದ ಅಮ್ಮನ ಕೊಲೆಗೈದ ಪುತ್ರಿ, ಆಕೆಯ ಪ್ರಿಯಕರ

08:30 AM Sep 14, 2024 | Team Udayavani |

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಾಯಿಯ ಕುತ್ತಿಗೆ ಬಿಗಿದು ಕೊಲೆಗೈದಿರುವ ಘಟನೆ ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೃತಳ ಪುತ್ರಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಹೊಂಗಸಂದ್ರ ನಿವಾಸಿ ಜಯಲಕ್ಷ್ಮೀ (48) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಮೃತಳ ಪುತ್ರಿ ಪವಿತ್ರಾ (28) ಮತ್ತು ಆಕೆಯ ಪ್ರಿಯಕರ ಲವನೀಶ್‌ (20) ಎಂಬವರನ್ನು ಬಂಧಿಸಲಾಗಿದೆ. ಸೆ.11ರಂದು ಆರೋಪಿಗಳು ಜಯಲಕ್ಷ್ಮೀ ಅವರನ್ನು ಕೊಲೆಗೈದಿದ್ದರು.

ಮೃತ ಜಯಲಕ್ಷ್ಮೀ ಕುಟುಂಬ ಜತೆ ಹೊಂಗಸಂದ್ರದಲ್ಲಿ ವಾಸವಾಗಿದ್ದು, ಪುತ್ರಿ ಪವಿತ್ರಾಗೆ ಜಯಲಕ್ಷ್ಮೀ ಸಹೋದರ ಸುರೇಶ್‌ ಎಂಬುವರ ಜತೆ 11 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ದಂಪತಿಗೆ 10 ಮತ್ತು 6 ವರ್ಷದ ಇಬ್ಬರು ಮಕ್ಕಳು ಇದ್ದಾರೆ. ಪತಿ ಸುರೇಶ್‌ ಮನೆ ಮುಂಭಾಗದ ಮಳಿಗೆಯಲ್ಲಿ ಪ್ರಾವಿಜನ್‌ ಸ್ಟೋರ್‌ ಇಟ್ಟುಕೊಂಡಿದ್ದಾರೆ. ಇನ್ನು ಇದೇ ಕಟ್ಟಡದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನವನೀಶ್‌, ಲೆಥ್‌ ಮಿಷನ್‌ ಕೆಲಸ ಮಾಡುತ್ತಿದ್ದ. ಈ ಮಧ್ಯೆ ನವನೀಶ್‌ ಮತ್ತು ಪವಿತ್ರಾ ನಡುವೆ ಪ್ರೇಮಾಂಕುರವಾಗಿದ್ದು, ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ಗಂಡ ಸುರೇಶ್‌ ಮತ್ತು ತಾಯಿ ಜಯಲಕ್ಷ್ಮೀ ನವನೀಶ್‌ನನ್ನು ಮನೆ ಖಾಲಿ ಮಾಡಿಸಿದ್ದರು. ಅದರಿಂದ ಆರೋಪಿ ಮನೆ ಸಮೀಪದಲ್ಲೇ ಮತ್ತೂಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.

15 ದಿನಗಳ ಹಿಂದೆ ಪತಿ ಸುರೇಶ್‌ ಮತ್ತು ತಾಯಿ ಜಯಲಕ್ಷ್ಮೀ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಪ್ರಿಯಕರನನ್ನು ಪವಿತ್ರಾ ಮನೆಗೆ ಕರೆಸಿಕೊಂಡಿದ್ದಳು. ಅದೇ ವೇಳೆ ಮನೆಗೆ ಬಂದ ಜಯಲಕ್ಷ್ಮೀ ಪವಿತ್ರಾಗೆ ಹೊಡೆದು ಬುದ್ಧಿವಾದ ಹೇಳಿದ್ದು, ಲವನೀಶ್‌ಗೂ ಹೊಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದೇ ವಿಚಾರವಾಗಿ ನಿತ್ಯ ತಾಯಿ-ಮಗಳ ನಡುವೆ ಜಗಳ ನಡೆಯುತ್ತಿತ್ತು.

ಅದರಿಂದ ಕೋಪಗೊಂಡಿದ್ದ ಪವಿತ್ರಾ, ಸೆ.11ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ತಾಯಿ ಜಯಲಕ್ಷ್ಮೀ ಕೊಲೆಗೈಯಲು ನಿರ್ಧರಿಸಿ, ಪ್ರಿಯಕರ ಲವನೀಶ್‌ ನನ್ನು ಕರೆಸಿಕೊಂಡಿದ್ದಾಳೆ. ಬಳಿಕ ಇಬ್ಬರು ಟವೆಲ್‌ನಿಂದ ಕುತ್ತಿಗೆ ಬಿಗಿದು ಜಯಲಕ್ಷ್ಮೀ ಕೊಲೆಗೈದು, ಶೌಚಾಲಯ ಸಮೀಪದ ಮಲಗಿಸಿದ್ದಾರೆ. ನಂತರ ಲವನೀಶ್‌ ಮನೆಯಿಂದ ಪರಾರಿಯಾಗಿದ್ದ. ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ಲವನೀಶ್‌ ಹಾಗೂ ಪವಿತ್ರಾಳನ್ನು ಬಂಧಿಸಿದ್ದಾರೆ.

Advertisement

ಕಾಲು ಜಾರಿ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ಪುತ್ರಿ! ಮನೆಯಲ್ಲಿ ಜಯಲಕ್ಷ್ಮೀಯನ್ನು ಕೊಂದ ಬಳಿಕ “ನಮ್ಮ ತಾಯಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಎಂದು ಪುತ್ರಿ ಪವಿತ್ರಾ ಕಥೆ ಕಟ್ಟಿದ್ದಾಳೆ. ಮಹಿಳೆ ಸಾವು ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಗುರುವಾರ ಸಂಜೆ ವರದಿಯಲ್ಲಿ ಕುತ್ತಿಗೆ ಬಿಗಿದು ಸಾವು ಎಂದು ವರದಿ ಬಂದಿತ್ತು. ಅದರಿಂದ ಅನುಮಾನಗೊಂಡ ಪೊಲೀಸರು, ಶುಕ್ರವಾರ ಪವಿತ್ರಾಳನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಕರನ ಜತೆ ಸೇರಿ ಎಸಗಿದ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾಳೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.