Advertisement

ಕಡೆಗೂ ರೇರಾ ಓಕೆ; ನಿಯಮಾವಳಿ ರೂಪಿಸಲು ರಾಜ್ಯ ಸಂಪುಟ ಅಸ್ತು

03:45 AM Jul 06, 2017 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಹಾಗೂ ಬಿಲ್ಡರ್‌ಗಳಿಂದ ನಿವೇಶನ, ಮನೆ, ಅಪಾರ್ಟ್‌ಮೆಂಟ್‌ ಖರೀದಿ ಮಾಡುವ ಗ್ರಾಹಕರಿಗೆ ಬಲ ತುಂಬುವ ಕೇಂದ್ರ ಸರ್ಕಾರದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ)ಗೆ ನಿಯಮಾವಳಿ ರೂಪಿಸಲು ರಾಜ್ಯ ಸಚಿವ ಸಂಪುಟ ಕೊನೆಗೂ ಬುಧವಾರ ಒಪ್ಪಿಗೆ ನೀಡಿದೆ. ಹಲವು ತಿಂಗಳುಗಳಿಂದ ಈ ಪ್ರಸ್ತಾವ ನೆನೆಗುದಿಗೆ ಬಿದ್ದಿತ್ತು.

Advertisement

ಚಾಲ್ತಿಯಲ್ಲಿರುವ ಯೋಜನೆಗಳ ಪೈಕಿ ಶೇ.60ರಷ್ಟು ಸಂಪೂರ್ಣಗೊಳಿಸಿ ಕ್ರಯ ಪತ್ರ ಮಾಡಿಕೊಟ್ಟಿರುವುದಕ್ಕೆ (ಉದಾ: ಹತ್ತು ಬ್ಲಾಕ್‌ಗಳಲ್ಲಿ ಆರು ಬ್ಲಾಕ್‌ ಪೂರ್ಣ)  ವಿನಾಯಿತಿ ನೀಡಲಾಗಿದೆ. ಬಿಡಿಎ ಹಾಗೂ ಗೃಹ ಮಂಡಳಿ ಸಹ  ಈ ಕಾಯ್ದೆಯ ವ್ಯಾಪ್ತಿಗೆ ಬರಲಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ನಿಯಮಾವಳಿ ಅಧಿಸೂಚನೆ ಹೊರಡಿಸಿದ ತಕ್ಷಣ ಇದು ಜಾರಿಗೆ ಬರಲಿದೆ. ಕ್ರೆಡಾಯ್‌ ಸೇರಿದಂತೆ ರಿಯಲ್‌ ಎಸ್ಟೇಟ್‌ -ಬಿಲ್ಡರ್ ವಲಯದ ಮನವಿ, ಸಲಹೆ ಎಲ್ಲವನ್ನೂ ಪರಿಗಣಿಸಿ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಿದರು.

2016 ರಲ್ಲಿ ಕೇಂದ್ರ ಸರ್ಕಾರ ರೇರಾ ಕಾಯ್ದೆ ತಂದಿತ್ತು. ಆರು ತಿಂಗಳಲ್ಲಿ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿಕೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡ ಆಗಿದೆ. ಗುಜರಾತ್‌, ರಾಜಸ್ಥಾನ ಸೇರಿ ಬೇರೆ ರಾಜ್ಯಗಳಲ್ಲಿ ರೂಪಿಸಿರುವ ಕಾಯ್ದೆ ಅಧ್ಯಯನ ಮಾಡಿ ನಿಯಮಾವಳಿ ರೂಪಿಸಿದ್ದೇವೆ. ಆದಷ್ಟು ಶೀಘ್ರ ಪ್ರಾಧಿಕಾರ ರಚನೆ ಸೇರಿ ಇತರೆ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದರು.

ವಿಳಂಬ
ರಾಜ್ಯ ಸರ್ಕಾರ ಸಾಕಷ್ಟು ಹಿಂದೆಯೇ ರೇರಾ ಕಾಯ್ದೆಗೆ ಕರಡು ನಿಯಮಾವಳಿ ರೂಪಿಸಿ ಕ್ರೆಡಾಯ್‌ ಸೇರಿದಂತೆ ರಿಯಲ್‌ ಎಸ್ಟೇಟ್‌ ವಲಯದಿಂದ ಆಕ್ಷೇಪಣೆ, ಸಲಹೆ ಸ್ವೀಕರಿಸಲಾಗಿತ್ತಾದರೂ ಪ್ರಭಾವಿಗಳ ಒತ್ತಡದಿಂದ ಅಂತಿಮ ನಿಯಮಾವಳಿ ರೂಪಿಸಿರಲಿಲ್ಲ. ಚಾಲ್ತಿಯಲ್ಲಿರುವ ಕೆಲವು ಯೋಜನೆಗಳ ಮಾಲೀಕರು ತಾವು ಸ್ವಾಧೀನಾನುಭವ ಪತ್ರ ಪಡೆದ ನಂತರ ನಿಯಮಾವಳಿ ರೂಪಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದರ ನಡುವೆ ಪ್ರತಿಪಕ್ಷಗಳು ಸರ್ಕಾರದ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಗ್ರಾಹಕರ ಸಂಘದಿಂದಲೂ ಆದಷ್ಟು ಬೇಗ ಕಾಯ್ದೆ ಜಾರಿಗೆ ಮನವಿ ಸಲ್ಲಿಸಲಾಗಿತ್ತು.

Advertisement

ಏನಿದು ಕಾಯ್ದೆ?
ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಬಿಲ್ಡರ್‌ಗಳಿಂದ ಮನೆ, ನಿವೇಶನ, ವಸತಿ ಸಮುತ್ಛಯ ಖರೀದಿ ಮಾಡುವ ಗ್ರಾಹಕರಿಗೆ ಒಪ್ಪಂದದಂತೆ ಕಾಲಮಿತಿಯಲ್ಲಿ ಹಂಚಿಕೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಕಾಯ್ದೆಯ ಪ್ರಮುಖ ಅಂಶ. ಒಂದು ವೇಳೆ ಉಲ್ಲಂಘನೆಯಾದರೆ ದಂಡ ಹಾಗೂ ಜೈಲು ಶಿಕ್ಷೆಯೂ  ಇದೆ. ಕಾಯ್ದೆ ಪ್ರಕಾರ, ರಾಜ್ಯ ಸರ್ಕಾರ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕು. ಅದಕ್ಕೆ ನಿವೃತ್ತ ನ್ಯಾಯಮೂರ್ತಿ ನೇಮಕಗೊಳಿಸಬೇಕು. ಎಲ್ಲ ರಿಯಲ್‌ ಎಸ್ಟೇಟ್‌ ಸಂಸ್ಥೆ, ಬಿಲ್ಡರ್‌ಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಸ್ಥಳೀಯ ಪ್ರಾಧಿಕಾರಗಳು ಹಾಗೂ ಸಕ್ಷಮ ಸಂಸ್ಥೆಗಳಿಂದ ಅನುಮತಿ ಪಡೆದ ನಂತರವಷ್ಟೇ ಗ್ರಾಹಕರಿಂದ ಮುಂಗಡ ಪಡೆಯಬೇಕು. ನಂತರ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕು.

ಜೈಲು ಶಿಕ್ಷೆಯೂ ಇದೆ
ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಹಸ್ತಾಂತರ ಮಾಡದ ಪ್ರಕರಣಗಳಲ್ಲಿ ದಂಡ ಹಾಗೂ ಜೈಲು ಶಿಕ್ಷೆಯೂ ಆಗಲಿದೆ. ಪ್ರತಿ ಗ್ರಾಹಕರ ಸಂಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು, ಕಾಮಗಾರಿಯ ಪ್ರಗತಿ ಹಂತ ವೈಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಗ್ರಾಹಕರಿಂದ ಸಂಗ್ರಹ ಮಾಡಿದ ಮುಂಗಡದ ಪೈಕಿ ಶೇ.70 ರಷ್ಟು ರೇರಾ ನಿಯಂತ್ರಣ ಪ್ರಾಧಿಕಾರದಲ್ಲಿ ಠೇವಣಿ ಇಡುವುದು, ದರ ನಿಗದಿಗೆ ಸರ್ಕಾರಿ ಮಾರ್ಗಸೂಚಿ ದರ ಅನ್ವಯವಾಗುವುದು ಸೇರಿದಂತೆ ಕೇಂದ್ರ ಸರ್ಕಾರದ ಕಾಯ್ದೆಯಲ್ಲಿರುವ ನಿಯಮಾವಳಿಗಳನ್ನೇ ಇಲ್ಲೂ ಅಳವಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next