ಬೆಂಗಳೂರು: ಸಂಕ್ಷಿಪ್ತ ಬರಹಗಳ ಓದಿಗೆ ಯುವ ಸಮೂಹ ಹೆಚ್ಚು ಆಸಕ್ತಿ ತೋರುವುದರಿಂದ ಚಿಕ್ಕ ಬರಹಗಳುಳ್ಳ ಕೃತಿಗಳ ರಚನೆಗೆ ಒತ್ತು ನೀಡಬೇಕು ಎಂದು ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ಜಿ.ಶಂಕರ್‌ಸುಬ್ಬ ಅಯ್ಯರ್ ಅವರು ರಚಿಸಿರುವ ಸೆಲಲೆಸ್ ಆ್ಯಕ್ಷನ್ ಪುಸ್ತಕವನ್ನು ಭಾನುವಾರಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂತರ್ಜಾಲ ಓದುಗರ ಸಂಖ್ಯೆ ಹೆಚ್ಚಾಗಿದ್ದು, ದೊಡ್ಡ ಬರಹಗಳತ್ತ ಜನ ನಿರಾಸ್ತಕಿ ತೋರುತ್ತಿದ್ದಾರೆ.
ಹಾಗಾಗಿ, ಯಾವುದೇ ವಿಚಾರಗಳನ್ನು ಸಂಕ್ಷಿಪ್ತ ರೂಪದಲ್ಲಿ ಬರೆಯುವ ಮೂಲಕ ಓದುಗರನ್ನು ಸೆಳೆಯುವ ಪ್ರಯತ್ನವಾಗಬೇಕು ಎಂದು ಹೇಳಿದರು. ಜೀವನಕ್ಕೆ ಅಗತ್ಯವಾದ ಸಂದೇಶ ಒಳಗೊಂಡಿರುವ ಭಗವದ್ಗೀತೆಯ ಅನೇಕ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಅಗತ್ಯವಿದೆ.
ಕರ್ಮ, ಜ್ಞಾನ ಹಾಗೂ ಮೋಕ್ಷ ಎಂಬ ಮೂರು ವಿಭಾಗಗಳನ್ನು ಗೀತೆ ಒಳಗೊಂಡಿದೆ. ಮೋಕ್ಷಕ್ಕಾಗಿ ಎಲ್ಲರೂ ಕರ್ಮ ಮಾಡುತ್ತಾರೆ. ಭಗವದ್ಗೀತೆಯ ಸಂದೇಶಗಳು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ. ಗೀತೆಯನ್ನು ಆಧರಿಸಿರುವ ಕೃತಿಗಳನ್ನು ಯುವ ಸಮೂಹವನ್ನು ತಲುಪಿಸುವ ನಿಟ್ಟಿನಲ್ಲಿ ಶಂಕರ್‌ಸುಬ್ಬ ಅಯ್ಯರ್ ಅವರ ಕೃತಿ ಉತ್ತಮವಾಗಿದೆ ಎಂದು ತಿಳಿಸಿದರು.
ಎನ್‌ಎಂಕೆಆರ್‌ವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಎಸ್.ರಂಗನಾಥ್ ಮಾತನಾಡಿ, ಬದುಕಿಗೆ ಬೇಕಾದ ದಿವ್ಯ ಸಂದೇಶಗಳನ್ನು ಭಗವದ್ಗೀತೆ ಒಳಗೊಂಡಿದೆ. ಆಸೆಪಡುವ ಮುನ್ನ ಅದಕ್ಕೆ ಅರ್ಹರಾಗಿರಬೇಕೆಂಬ ಅರ್ಥಪೂರ್ಣ ಮಾತುಗಳನ್ನು ನಾವು ಗೀತೆ ಮೂಲಕ ಅರಿಯಬಹುದು.
ಅಂತಹ ಗೀತೆಯ ಒಳಾರ್ಥಗಳನ್ನು ಸೆಲ್ಫ್ಲೆಸ್ ಆ್ಯಕ್ಷನ್ ಕೃತಿ ಒಳಗೊಂಡಿದೆ. ಒಟ್ಟಾರೆ ಗೀತೆಯ ಸಾರ ಇದರಲ್ಲಿದೆ ಎಂದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ಕಾರ್ಯದರ್ಶಿ ಎಚ್.ಎನ್.ಸುರೇಶ್, ಪುಸ್ತಕದ ಸಂಪಾದಕ ಡಾ.ವೆಂಕಟರಾವ್ ಉಪಸ್ಥಿತರಿದ್ದರು.