Advertisement

ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ

09:36 PM Jul 08, 2019 | Lakshmi GovindaRaj |

ಚಿಂತಾಮಣಿ: ಸರ್ಕಾರ ರೈತರಿಗೆ ಬೆಳೆ ನಷ್ಟ ಹಾಗೂ ಬರಗಾಲದ ಪರಿಹಾರ ಹಣ ವಿತರಣೆ ಮಾಡಬೇಕು, ತಾಲೂಕಿನ ಎಲ್ಲಾ ಕೆರೆಗಳಿಗೆ ಕೆ.ಸಿ.ವ್ಯಾಲಿ ಹಾಗೂ ಹೆಚ್‌.ಎನ್‌.ವ್ಯಾಲಿ ನೀರು ಹರಿಸಬೇಕು, ದನಕರುಗಳಿಗೆ ಸಮರ್ಪಕ ಮೇವು ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಜೆ.ವಿ.ರಘುನಾಥರೆಡ್ಡಿ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಜಾಥಾ ಆರಂಭಿಸಿ, ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ನೀರು ಪೂರೈಕೆಗೆ ಆಗ್ರಹ: ಪ್ರತಿಭಟನಾಕಾರರು ಉಪ ತಹಶೀಲ್ದಾರ್‌ ಶೋಭಾರವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುವಂತಾಗಿದ್ದು, ರೈತರ ಬೆಳೆಗಳು ನಾಶವಾಗಿದೆ.

ಇದುವರೆಗೂ ಬೆಳೆ ನಷ್ಟ ಪರಿಹಾರದ ಹಣ ವಿತರಣೆ ಮಾಡಿಲ್ಲ. ನಗರ ಹಾಗೂ ತಾಲೂಕಿನಾದ್ಯಾಂತಹ ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು ಹಾಗೂ ಮತಿತ್ತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.

ಚಿಂತಾಮಣಿ ತಾಲೂಕು ಕಡೆಗಣನೆ: ರಾಜ್ಯಾಧ್ಯಕ್ಷ ಜೆ.ವಿ.ರಘುನಾಥರೆಡ್ಡಿ ಮಾತನಾಡಿ, ಕೆ.ಸಿ.ವ್ಯಾಲಿ ಹಾಗೂ ಹೆಚ್‌.ಎನ್‌ ವ್ಯಾಲಿ ನೀರು ಹರಿಸಲು ಚಿಂತಾಮಣಿ ತಾಲೂಕು ಕಡೆಗಣಿಸಲಾಗಿದ್ದು, ಕೂಡಲೇ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಕೆ.ಸಿ.ವ್ಯಾಲಿ ಹಾಗೂ ಹೆಚ್‌.ಎನ್‌ ವ್ಯಾಲಿಗಳಿಂದ ಚಿಂತಾಮಣಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಶಾಸಕರು, ಸಂಸದರು ಮುಂದಾಗಬೇಕು, ರೈತರಿಗೆ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ಬೆಳೆ ನಷ್ಟ ಹೊಂದಿದ ಎಲ್ಲಾ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ವಿತರಿಸಬೇಕು.

ದರಕಾಸ್ತು ಅರ್ಜಿಗಳನ್ನು ಫಾರಂ ನಂ. 57 ಅನ್ನು ರೈತರ ಬಳಿಯ ಎಲ್ಲಾ ದರಕಾಸ್ತು ಅರ್ಜಿಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು, 2019-20ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಯಾವುದೇ ಬೆಳೆಗಳನ್ನು ಬಿತ್ತನೆ ಮಾಡಿರುವುದಿಲ್ಲ. ಚಿಂತಾಮಣಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಚಿಂತಾಮಣಿ ಅತಿದೊಡ್ಡ ತಾಲೂಕಾಗಿದ್ದು, ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಾಯಪ್ಪ, ಬಿ.ವಿ.ಶ್ರೀರಾಮರೆಡ್ಡಿ, ಕೆ.ವಿ.ರಾಮಪ್ಪ, ವಿ.ಚೆನ್ನರಾಯಪ್ಪ, ವೆಂಕಟಸುಬ್ಟಾರೆಡ್ಡಿ, ಜಿ.ಎನ್‌.ನರಸಿಂಹಮೂರ್ತಿ, ಎಂ.ವಿ.ವೆಂಕಟರೆಡ್ಡಿ, ಸರೋಜಮ್ಮ, ಶಾಂತಮ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next