ಹರಪನಹಳ್ಳಿ: ತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸುವುದು, ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆ ಅನುಷ್ಠಾನ, ಸೈನಿಕ್ ಹುಳು ಬೆಳೆ ನಷ್ಟ ಹಾಗೂ ಬೆಳೆ ವಿಮೆ ಪರಿಹಾರ, ಉದ್ಯೋಗ, ಆಹಾರ, ಆರೋಗ್ಯ ಭದ್ರತೆ, ಸಮಗ್ರ ನೀರಾವರಿ, ಜಾನುವಾರುಗಳಿಗೆ ಗೋಶಾಲೆ, ಮೇವು, ಕುಡಿಯುವ ನೀರು ಸೇರಿದಂತೆ ಒಟ್ಟು 23 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಲ ಭಾರತ ಕಿಸಾನ್‌ಸಭಾ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರೈತ ಸಂಘದ(ನಂಜುಂಡಸ್ವಾಮಿ ಬಣ) ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಂ.ಮಹೇಶ್ವರಸ್ವಾಮಿ ಮಾತನಾಡಿ, ತಾಲೂಕು ಶತತವಾಗಿ ಬರಗಾಲಕ್ಕೆ ತುತ್ತಾಗಿದ್ದು, ಕುಡಿಯುವ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಅಂತರ್ಜಲ ಕುಸಿತದಿಂದ ಕಂಗಾಲಾಗಿದ್ದು, ಕೊಳವೆಬಾವಿ ಕೊರೆಸಿದರೂ ನೀರು ಸಿಗದಿರುವುದರಿಂದ ರೈತರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ತಾಲೂಕಿನ 50 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಟ್ಟಿರುವ ಹರಪನಹಳ್ಳಿ ತಾಲೂಕಿನಲ್ಲಿ ಹಿಂದುಳಿದ ಪ್ರದೇಶ ವಿಶೇಷ ಅನುದಾನ ಮತ್ತು ಹೈದ್ರಾಬಾದ್ ಕರ್ನಾಟಕ ಮಂಡಳಿ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳುವುಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದ್ದರೂ ದುಡಿಯುವ ಕೈಗಳಿಗೆ ಕೆಲಸ ಕೊಡದಿರುವುದು ಮತ್ತು ಬರ, ಹಸಿವು, ಬಡತನ, ನಿರುದ್ಯೋಗ ನಿವಾರಣೆ ಸಾಧ್ಯವಾಗಿಲ್ಲ. ಕೆಲಸ ಅರಸಿ ದೂರದ ಕಾಫಿ ಸೀಮೆಗೆ ಜನರು ಗುಳೆ ಹೋಗುತ್ತಿರುವುದು ಯೋಜನೆಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ ಎಂದು ದೂರಿದರು.
ಎಐಕೆಎಸ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್‌ಎನ್‌ಟಿ ಕಂಪನಿ ಈಗಾಗಲೇ ಪೈಪ್‌ಗ್ಳ ಸಂಗ್ರಹ ಮಾಡುತ್ತಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರಾದ ಕರಡಿದುರ್ಗ ಚೌಡಪ್ಪ, ಪಾಟೀಲ್ ಸಿದ್ದನಗೌಡ, ಗುಡಿಹಳ್ಳಿ ಹಾಲೇಶ್, ಆರ್.ಗೋಣ್ಯೆಪ್ಪ, ಎ.ಡಿ.ದ್ವಾರಕೀಶ್, ರಂಗಪ್ಪ, ಎಂ.ಶಫೀವುಲ್ಲಾ, ರಂಗಪ್ಪ, ಭರಮಪ್ಪ, ಕೆ.ವಿರೂಪಾಕ್ಷಪ್ಪ, ಕರಿಯಪ್ಪ, ಮಹ್ಮದ್ ಇಬ್ರಾಹಿಂ, ಹುಲಿಕಟ್ಟಿ ರಾಜಪ್ಪ ಇನ್ನಿತರರಿದ್ದರು.