Advertisement

ಜನಸಂಖ್ಯೆಗುನುಗುಣವಾಗಿ ಸೌಲಭ್ಯವೂ ಬೇಕು

05:27 PM Aug 16, 2018 | |

ಚಿತ್ರದುರ್ಗ: ಸತತ ಬರಕ್ಕೆ ತುತ್ತಾಗುತ್ತಿರುವ ತಾಲೂಕುಗಳಲ್ಲಿ ಚಿತ್ರದುರ್ಗವೂ ಒಂದು. ಇದು ಜನಜೀವನ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ.

Advertisement

ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಳವಾಗಲಿರುವ ಜನಸಂಖ್ಯೆಗೆ ಅನುಗುಣವಾಗಿ ಕೃಷಿ, ಕೈಗಾರಿಕೆ, ರಸ್ತೆ, ಶುದ್ಧ ಕುಡಿಯುವ ನೀರು, ವಸತಿ, ಸಾರಿಗೆ ಸೌಲಭ್ಯ, ಶಿಕ್ಷಣ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಸೃಷ್ಟಿ, ಮಳೆ ನೀರು ಕೊಯ್ಲು ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಬೇಕಿದೆ. ಈ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಿ ಜನರ ಕನಸು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. 

ಕೃಷಿ: ಕೃಷಿ ಲಾಭದಾಯಕವಲ್ಲ ಎನ್ನುವ ವಾತಾವರಣ ರೈತ ಕುಟುಂಬಗಳಲ್ಲಿ ಮೇಳೈಸುತ್ತಿದೆ. ರೈತರು, ರೈತ ಕುಟುಂಬದ ಮಕ್ಕಳು ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ರೈತರ ಗುಳೆ ತಪ್ಪಿಸಿ ಕೃಷಿಯತ್ತ ಮತ್ತೆ ಮುಖ ಮಾಡಬೇಕಾದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆಯೊಂದಿಗೆ ಬಡ್ಡಿ ರಹಿತ ಸಾಲ ಸೌಲಭ್ಯ, ಆಧುನಿಕ ಯಂತ್ರೋಪಕರಣಗಳ ಪೂರೈಕೆ, ನೀರಾವರಿ ಸೌಲಭ್ಯ, ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಸೂಕ್ತ ಮಾರಕಟ್ಟೆ, ಬೆಂಬಲ ಬೆಲೆ, ಆಹಾರೋತ್ಪಾದನೆಯ ಮೌಲ್ಯವರ್ಧನೆ ಮತ್ತಿತರ ಸುಸ್ಥಿರ ಬೇಸಾಯ ಕ್ರಮಗಳಿಗೆ ಒತ್ತು ನೀಡಬೇಕಾಗಿದೆ.

ಸಾಧ್ಯವಾದರೆ ಅನುತ್ಪಾದಕ ಭೂಮಿಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಲು ಸಹಕಾರಿ ಕೃಷಿ ಪದ್ಧತಿಯನ್ನು ಜಾರಿ ಮಾಡಬೇಕು. ಪ್ರತ್ಯಕ್ಷ-ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಕೃಷಿ ವಲಯ ಕಡೆಗಣಿಸಿದರೆ ಅಭಿವೃದ್ಧಿ ಮರೀಚಿಕೆಯಾಗಲಿದೆ. 

ಕೈಗಾರಿಕೆ: ಕೈಗಾರಿಕೆ ಸ್ಥಾಪನೆ ಮಾಡಲು ಪೂರಕ ವಾತಾವರಣವನ್ನು ಗಮನದಟ್ಟುಕೊಂಡು ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದರೆ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ವಿದೇಶಿ ಹೂಡಿಕೆ ಜತೆಗೆ ದೇಶಿ ಹೂಡಿಕೆ ಪ್ರಮಾಣವೂ ಹೆಚ್ಚುತ್ತದೆ. ಸ್ಥಳೀಯವಾಗಿ ಆರ್ಥಿಕ ಅಭಿವೃದ್ಧಿ ಉತ್ತಮವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ತಳ ಮಟ್ಟದ ಉದ್ದಿಮೆಗಳಿಗೆ ಹೂಡಿಕೆ ಹರಿದು ಬಂದರೆ ಸ್ವಾಭಾವಿಕವಾಗಿ ಶೈಕ್ಷಣಿಕ ವಲಯದ ಅಭಿವೃದ್ಧಿಗೂ ಹೂಡಿಕೆದಾರರು ಮುಂದೆ ಬರುತ್ತಾರೆ. ದೂರಗಾಮಿ ಆಲೋಚನೆ ಇಟ್ಟುಕೊಂಡಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ.

Advertisement

ರಸ್ತೆ ಅಗಲೀಕರಣ: ಚಿತ್ರದುರ್ಗ ನಗರ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 30 ಅಡಿ ಅಗಲದ ರಸ್ತೆಯನ್ನಾದರೂ ನಿರ್ಮಾಣ ಮಾಡಬೇಕು. ಕಿಷ್ಕಿಂದೆಯಂತಿರುವ ರಸ್ತೆಗಳ ಅಗಲೀಕರಣ ಮಾಡಿ ಆಧುನಿಕ ವಿನ್ಯಾಸದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸಂದರವಾಗಿ ಕಾಣುವಂತೆ ಮಾಡಬೇಕು. ಅಲ್ಲದೆ ಪ್ರತಿಯೊಂದು ಊರಿಗೂ ದ್ವಿಮುಖ ರಸ್ತೆ ಸಂಪರ್ಕ ಇರಬೇಕು.

ಶಿಕ್ಷಣ ಮತ್ತು ಆರೋಗ್ಯ: ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ. ಗುಣಮಟ್ಟದ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್‌ಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಿಗಬೇಕು. ಸರ್ಕಾರಿ ಶಾಲೆಗಳು ಉನ್ನತೀಕರಣಗೊಳ್ಳಬೇಕು. ಹಳ್ಳಿಗಳಲ್ಲಿ ಇಂಗ್ಲಿಷ್‌ ಆಧಾರಿತ ಗುಣಾತ್ಮಕ ಶಿಕ್ಷಣ ದೊರೆತರೆ ನಗರ ಪ್ರದೇಶದ ಖಾಸಗಿ ಶಾಲೆಗಳ ಕಡೆ ಜನತೆ ನೋಡುವುದಿಲ್ಲ. ಆಗ ಹಳ್ಳಿಗಳು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಣಕ್ಕೆ ಕೊಟ್ಟ ಮಹತ್ವದಷ್ಟೇ ಆರೋಗ್ಯ ಕ್ಷೇತ್ರಕ್ಕೂ ಕೊಡಬೇಕು. ಗ್ರಾಪಂ, ಹೋಬಳಿ ಮಟ್ಟಗಳಲ್ಲಿ ಹೈಟೆಕ್‌ ಆಸ್ಪತ್ರೆಗಳು ನಿರ್ಮಾಣ, ತಜ್ಞ ವೈದ್ಯರ ನೇಮಕ, ಆಸ್ಪತ್ರೆಗಳಿಗೆ ಆಧುನಿಕ ಶಸ್ತ್ರಚಿಕಿತ್ಸಾ ಯಂತ್ರೋಪಕರಣ ಪೂರೈಕೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಸಿಗುವ ಎಲ್ಲ ರೀತಿಯ ಆರೋಗ್ಯ ಸೇವೆಗಳು ಹಳ್ಳಿಗಳಲ್ಲೂ ಸಿಗುವಂತಾಗಬೇಕು.

ಉತ್ತಮ ಪರಿಸರ: ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸರ್ಕಾರಿ, ಖಾಸಗಿ, ರೈತರ ಜಮೀನುಗಳಲ್ಲಿ ಗಿಡ, ಮರಗಳುಳ್ಳ ಅರಣ್ಯ, ಅರೆ ಅರಣ್ಯ ನಿರ್ಮಾಣ ಮಾಡಬೇಕು. ಉತ್ತಮ ಗಾಳಿ, ಮಳೆ, ಯೋಗ್ಯ ವಾತಾವರಣಕ್ಕಾಗಿ ಪರಿಸರ ಕಲುಷಿತವಾಗದಂತೆ ಎಚ್ಚರ ವಹಿಸಬೇಕು.

ಕಸಮುಕ್ತ ಕ್ಷೇತ್ರ: ಪರಿಸರ ಸ್ನೇಹಿ ಹಾಗೂ ಕಸಮುಕ್ತ ಕ್ಷೇತ್ರವನ್ನಾಗಿ ಮಾಡಲು ಬದ್ಧರಾಗಿರಬೇಕು. ಕಸದ ಸಮಸ್ಯೆ ನಗರ ವ್ಯಾಪ್ತಿ ಮೀರಿ ಹಳ್ಳಿಗಳಿಗೂ ಕಾಲಿಟ್ಟಿದೆ. ಆಡಳಿತದಲ್ಲಿ ಜನರ ಸಹಭಾಗಿತ್ವ, ಬೀದಿ ವ್ಯಾಪಾರಿಗಳ ರಕ್ಷಣೆ, ಉತ್ತಮ ವಸತಿ ಸೌಕರ್ಯ, ಸರ್ಕಾರಿ ಭೂಮಿ ರಕ್ಷಿಸಿ, ಅಲ್ಲಿ ಸಾರ್ವಜನಿಕ ಉದ್ಯಾನ ಮತ್ತು ಇತರೆ ಸೌಕರ್ಯ ಒದಗಿಸಬೇಕು.

ಕುಡಿಯುವ ನೀರು: ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಭವಿಷ್ಯದಲ್ಲಿ ಹನಿ ನೀರಿಗೂ ಪರದಾಡುವ ಸಾಧ್ಯತೆ ಇರುವುದರಿಂದ ಮಳೆ ನೀರು ಕೊಯ್ಲಿಗೆ ಉತ್ತೇಜನ ನೀಡಬೇಕು. ಕೆರೆ, ಕಟ್ಟೆ, ಗೋಕಟ್ಟೆ, ಚೆಕ್‌ಡ್ಯಾಂ ನಿರ್ಮಾಣದಂತಹ ಕಾರ್ಯ ಮಾಡಿದಾಗ ಮಾತ್ರ ಜನ, ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ನೀಡಲು ಸಾಧ್ಯ.
 
ಸಾರಿಗೆ ಸೌಲಭ್ಯ: ಜನಸಂಖ್ಯೆ ಹೆಚ್ಚಳವಾದಂತೆ ಸಾರಿಗೆ ಸೌಲಭ್ಯ ಪ್ರತಿ ಗ್ರಾಮ, ನಗರ ಪ್ರದೇಶಕ್ಕೆ ವಿಸ್ತರಣೆ ಮಾಡುವುದರ ಜೊತೆಯಲ್ಲಿ ಬಸ್‌ ಗಳ ಓಡಾಟ ಹೆಚ್ಚಿಸಬೇಕು. ಪ್ರಯಾಣಿಕರ ಆಕರ್ಷಣೆಗಾಗಿ ಹೈಟೆಕ್‌ ಬಸ್‌ನಿಲ್ದಾಣ ಆಗಬೇಕು.

ಮಳೆ ನೀರು ಕೊಯ್ಲು: ರೈತರ ಜಮೀನು, ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಬೇಕು. ನೀರಿನ ಮರು ಬಳಕೆಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕು. ಅಂತರ್ಜಲ ಮರುಪೂರಣ ಕ್ರಿಯೆ ವ್ಯಾಪಕವಾಗಿ ಆಗಬೇಕು. ಅನಗತ್ಯವಾಗಿ ಹರಿದು ಹೋಗುವ ನೀರನ್ನು ಗುಂಡಿ ಮೂಲಕ ಭೂಮಿಗೆ ಇಂಗುವಂತೆ ಮಾಡಬೇಕು.

ಪ್ರವಾಸೋದ್ಯಮ: ಚಿತ್ರದುರ್ಗ ತಾಲೂಕು ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದಂತಿದೆ. ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ, ಜೋಗಿಮಟ್ಟಿ, ಮರಡಿಗುಡ್ಡ ಮತ್ತಿತರ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಿ ಪ್ರವಾಸಿಗರನ್ನು ಆಕರ್ಷಿಸಿದರೆ ಹೆಚ್ಚಿನ ಆರ್ಥಿಕ ವಹಿವಾಟು ಆಗಲಿದೆ.

ಕ್ರೀಡಾಂಗಣ: ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಬೇಕು. ಶಿಕ್ಷಣಕ್ಕೆ
ನೀಡಿದಷ್ಟೇ ಆದ್ಯತೆಯನ್ನು ಕ್ರೀಡಾ ಕ್ಷೇತ್ರಕ್ಕೂ ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ. ಸ್ಮಶಾನಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಸ್ಮಶಾನ ನಿರ್ಮಾಣಕ್ಕಾಗಿ ಪ್ರತಿ ಗ್ರಾಮದಲ್ಲೂ ಜಾಗ ಮೀಸಲಿಡಬೇಕು.
 
ವಸತಿ ಸಮುಚ್ಚಯ: ಗ್ರಾಮೀಣ ಮತ್ತು ನಗರ ಪ್ರದೇಗಳೆರಡರಲ್ಲೂ ಅತ್ಯಾಧುನಿಕ ಸೌಲಭ್ಯಗಳುಳ್ಳ ವಿಶಾಲ ರಸ್ತೆಗಳೊಂದಿಗೆ ಬಹು ಮಹಡಿಗಳ ವಸತಿ ಸೌಲಭ್ಯ ಒದಗಿಸಿ ಗುಡಿಸಲು ಮುಕ್ತ ಕ್ಷೇತ್ರ ಮಾಡಬೇಕು.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next