Advertisement

ಗುಣಮಟ್ಟದ ಶಿಕ್ಷಣದಿಂದ ಕನ್ನಡಕ್ಕೆ ಬೇಡಿಕೆ

11:51 AM Jul 17, 2017 | |

ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಕೊಟ್ಟರೆ ಕನ್ನಡಕ್ಕೆ ಬೇಡಿಕೆ ತಾನಾಗಿಯೇ ಹೆಚ್ಚುತ್ತದೆ ಎಂದು ಮೂಡಬಿದರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2016-17ನೇ ಸಾಲಿನ ಪ್ರವೇಶ, ಕಾವ, ಜಾಣ, ರತ್ನ ಮತ್ತು ಶಾಸನಶಾಸ್ತ್ರ ಡಿಪ್ಲೊಮಾ ಪರೀಕ್ಷೆಗಳ ರ್‍ಯಾಂಕ್‌ ವಿಜೇತರಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. 

ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಆಗಬೇಕು. ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಫ‌ಲಿತಾಂಶ ಮಾತ್ರ ಕಡಿಮೆ. ಸಿಬಿಎಸ್‌ಸಿ, ಇಂಗ್ಲೀಷ್‌ ಮಾಧ್ಯಮದಲ್ಲಿ ಕೇವಲ 3 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರೂ ಫ‌ಲಿತಾಂಶ ಜಾಸ್ತಿ ಇದೆ.

ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಸಿಗದಿದ್ದರೆ ಕನ್ನಡ ಮಾಧ್ಯಮದಿಂದ ಇಂಗ್ಲೀಷ್‌ ಮಾಧ್ಯಮಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತದೆ. ಸರ್ಕಾರ ಕನ್ನಡ ಮಾಧ್ಯಮ ಉಳಿಸಲು ಕಠಿಣ ಕ್ರಮಕೈಗೊಂಡು, ಗುಣಮಟ್ಟದ ಜತೆಗೆ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಹೇಳಿದರು.

ಮೂಡಬಿದರೆಯಲ್ಲಿ ನಮ್ಮದು ಕನ್ನಡ ಮಾಧ್ಯಮ ಶಾಲೆಯೊಂದಿದ್ದು, ಶೇ.100ರಷ್ಟು ಫ‌ಲಿತಾಂಶ ಬರುತ್ತಿದೆ. ಇದರಿಂದ ನೋಂದಣಿಗಾಗಿ ಪ್ರತಿವರ್ಷ ಸುಮಾರು 17 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬರುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಎಂದು ಮುಚ್ಚುವುದು ನೆಪ ಮಾತ್ರ. ಸರ್ಕಾರ ಇದನ್ನು ಗಂಭೀರವಾಗಿ ಪರಿಣಗಣಿಸದಿದ್ದರೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳೇ ಇಲ್ಲವಾಗುವ ಸಾಧ್ಯತೆ ಇದೆ. ಈಗಾದರು ಎಚ್ಚೆತ್ತುಕೊಳ್ಳುವ ಅಗತ್ಯತೆ ಇದೆ ಎಂದು ಸಲಹೆ ನೀಡಿದರು. 

Advertisement

ಕನ್ನಡ ಶಾಲೆಗಳಲ್ಲಿ ಗುಣಮಟ್ಟವಿಲ್ಲ ಏಕೆ?: ಶಿಕ್ಷಣ ತಜ್ಞ ಪ್ರೊ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, “ಸರ್ಕಾರವೇ ನಡೆಸುವ ಬೆಂಗಳೂರು ಮೆಡಿಕಲ್‌ ಕಾಲೇಜ್‌ಗೆ ಅಪಾರ ಬೇಡಿಕೆ ಇದೆ. ನವೋದಯ ಶಾಲೆಗಳಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ, ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುತ್ತಿಲ್ಲವೇಕೆ.

ಅದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ರಾಜ್ಯದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಪ್ರಾಥಮಿಕ ಶಾಲೆಗಳಲ್ಲಿ ಪ್ರಯೋಗಾಲಯಗಳೇ ಇಲ್ಲ. ವಿಷಯವಾರು ಶಿಕ್ಷಕರ ಕೊರತೆ ಇದೆ. ಪ್ರತಿರ್ಷ 27 ಸಾವಿರ ಶಿಕ್ಷಕರು ನಿವೃತ್ತರಾದರೂ, ನೇಮಕಾತಿ ಪ್ರಮಾಣ ಶೂನ್ಯ,’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರತೀ ಬಾರಿ ಶೇ.12ರಷ್ಟು ಬಜೆಟ್‌ನ್ನು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಲಾಗುತ್ತಿತ್ತು. ಈ ಬಾರಿ ಕೇವಲ ಶೇ.9ರಷ್ಟು ಇಡಲಾಗಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಅನುದಾನ ಕಡಿಮೆಯಾಗಿದೆ. ಇದಕ್ಕೆ ಅನೇಕ ರಾಜಕಾರಣಿಗಳು ಖಾಸಗಿ ಶಾಲಾ, ಕಾಲೇಜುಗಳನ್ನು ಹೊಂದಿರುವುದೇ ಕಾರಣ.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ಕಲ್ಪಿಸಬೇಕು. ಆಗ ಜನ ಕನ್ನಡ ಮಾಧ್ಯಮಗಳತ್ತ ಬರುತ್ತಾರೆ. ಒಂದರಿಂದ ಎಸ್‌ಎಸ್‌ಎಲ್‌ಸಿ ವರೆಗೂ ಇಂಗ್ಲೀಷ್‌ ಸೇರಿದಂತೆ ಎಲ್ಲ ವಿಷಯಗಳನ್ನು ಗುಣಮಟ್ಟದಿಂದ ಕಲಿಸಿದರೆ, ಕನ್ನಡ ಮಾಧ್ಯಮದವರಿಗೆ ಇಂಗ್ಲೀಷ್‌ ಭೂತವಾಗಿ ಕಾಡುವುದಿಲ್ಲ.  ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನುಬಳಿಗಾರ್‌, ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ರ್‍ಯಾಂಕ್‌ ವಿಜೇತರು
-ಪ್ರವೇಶ:
ಎಂ.ಚಂದನ, ಎ.ಶಶಾಂಕ್‌, ಧಾತ್ರಿ 
-ಕಾವ: ಮಹದೇವಪ್ಪ, ಎನ್‌.ಗೌತಮ್‌, ಎ.ಕುಸುಮಿತ, ಡಾ.ಸಮತ
-ಜಾಣ: ಟಿ.ಮಂಜುಳಾ, ಜಿ.ಸುಪ್ರಿತ, ಈರಣ್ಣ ಗದ್ದಿಗೆಪ್ಪ ಅರಳಿ
-ರತ್ನ: ಬಿ.ಆರ್‌.ಅನ್ನಪೂರ್ಣ, ಜ್ಯೋತಿ ಕುಮಟಾಕರ್‌, ಆರ್‌.ಎಸ್‌.ಕಾವ್ಯ, ಬಿ.ಎಸ್‌.ಚಂದ್ರಕಲಾ
-ಶಾಸನ ಶಾಸ್ತ್ರ ಡಿಪ್ಲೊಮಾ: ಎಂ.ಸುಪ್ರಿಯಾ, ಎಂ.ಕವಿತ, ರೇಣುಕ ಸ್ವಾಮಿ ಒಡೆಯರ್‌.

Advertisement

Udayavani is now on Telegram. Click here to join our channel and stay updated with the latest news.

Next