Advertisement

ಶಾಲಾ ನೌಕರರ ಪಿಂಚಣಿಗೆ ಆಗ್ರಹ

03:25 PM Dec 06, 2020 | Suhan S |

ವಿಜಯಪುರ: 2021 ಜ. 4ರ ಒಳಗಾಗಿ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಸಂಚಾಲಕ ಎಲ್‌.ಎಸ್‌. ಕಿರನಳ್ಳಿ, ಸರ್ಕಾರ 1-4-2006ರಿಂದಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಾಗಲಿ, ವಂತಿಗೆ ಅಧಾರಿತ ನೂತನ ಪಿಂಚಣಿ ಯೋಜನೆ ಸೌಲಭ್ಯವನ್ನು ನೀಡಿಲ್ಲ. ಆದರೆ 1-04-2006 ಕ್ಕೂ ಮೊದಲು ಪಿಂಚಣಿ ವಿಚಾರದಲ್ಲಿ ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯ ಇದ್ದಿಲ್ಲ. ಈಗಾಗಲೇ ಸಾವಿರಾರು ನೌಕರರು ಕೊನೇ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತರಾಗಿದ್ದಾರೆ.

ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸುವಂತೆ ಕಳೆದ 10 ವರ್ಷಗಳಿಂದ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಬೇಡಿಕೆ ಈಡೇರಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದರಿಂದ ಮನನೊಂದು ಇದೇ ಚಳಿಗಾಲದ ಅಧಿವೇಶನದಲ್ಲಿ 7-12-2020ರಿಂದ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಂಘಟನೆ ತೀರ್ಮಾನಿಸಿತ್ತು. ಆದರೆ ಪ್ರಸ್ತುತ 30-11-2020ರಿಂದ ಗ್ರಾಮ ಪಂಚಾಯತ್‌ ಚುನಾವಣೆಯನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಉಗ್ರ ಹೋರಾಟವನ್ನು ಹಿಂದಕ್ಕೆ ಪಡೆದಿದ್ದು, 4-1-2021ರ ಒಳಗಾಗಿ ನ್ಯಾಯಯುತವಾದ ನಮ್ಮ ಪಿಂಚಣಿ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎಸ್‌. ಹಿರೇಮಠ ಮಾತನಾಡಿ, ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಮಾನವೀಯ ಬೇಡಿಕೆಗಳಾಗಿದ ಇವುಗಳನ್ನು ಸರ್ಕಾರ ತುರ್ತಾಗಿ ಈಡೇರಿಸಲು ಮುಂದಾಗಬೇಕು. ಬರುವ ಜ. 4 ರೊಳಗೆ ಪಿಂಚಣಿ ಸೌಲಭ್ಯ ಒದಗಿಸಿ ನಮ್ಮ ಸಂಧ್ಯಾಕಾಲದ ಊರುಗೋಲಾಗಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರಿಗೂ ಮನವಿ ಸಲ್ಲಿಸಿ, ಕೆಡಪಿ ಸಭೆಯಲ್ಲಿ ಚರ್ಚಿಸುವಂತೆ ಮನವಿ ಮಾಡಿದರು.

ಎಸ್‌.ಎಸ್‌. ಉಮ್ಮರಗಿ, ಎಂ.ಎ. ಲೋಣಿ, ಎಸ್‌.ಎನ್‌. ನಾಗೂರ, ಎಂ.ಆರ್‌.ಪಾಟೀಲ, ಪಿ.ಎಸ್‌. ಇಂಡಿ, ವಿ.ಎನ್‌. ಚವ್ಹಾಣ, ಪಿ.ಬಿ. ಕುಂಟರಡ್ಡಿ, ಎಂ.ಎನ್‌. ಮೇರೆಕೋರ, ವಿ.ಪಿ. ಮೇಲ್ಮನಿ, ಎನ್‌.ಡಿ. ಇಟಗಿ, ಎಸ್‌.ಎನ್‌. ಯಾಳವಾರ, ಅಶೋಕ ಕಟ್ಟಿ, ಬಿ.ಸಿ. ಶಿರೋಳಕರ, ಎಸ್‌.ಸಿ. ಗುಡುಗುಂಟಿ, ಟಿ.ಬಿ. ಪುಟಜಾಲಿ, ಟಿ.ಎಚ್‌. ಮುಲ್ಲಾ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next