Advertisement

ಪರಿಶಿಷ್ಟ ಜಾತಿ ಸೌಲಭ್ಯ ಮುಂದುವರಿಸಲು ಆಗ್ರಹ

04:23 PM Apr 07, 2022 | Team Udayavani |

ಶಿರಸಿ: ಜಿಲ್ಲಾ ಮೊಗೇರ ಸಮುದಾಯಕ್ಕೆ ಅಸಂವಿಧಾನಿಕವಾಗಿ ತಡೆ ಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನು ವಿಳಂಬವಿಲ್ಲದೇ ಮುಂದುವರಿಸಬೇಕು ಎಂದು ಜಿಲ್ಲಾ ಮೊಗೇರ ಸಂಘದ ಶಿರಸಿ ಘಟಕ ಸರಕಾರವನ್ನು ಆಗ್ರಹಿಸಿದೆ.

Advertisement

ನಗರದಲ್ಲಿ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದ ಸಂಘಟನೆ ಪ್ರಮುಖರು, ಜಿಲ್ಲೆಯ ಮೊಗೇರ ಸಮುದಾಯದ ಪೂರ್ವಿಕರು ಅನೇಕ ವರ್ಷಗಳ ಹಿಂದೆ ಅವಿಭಜಿತ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದವರು. ವಲಸೆ ಬಂದ ಸ್ಥಳದಲ್ಲಿ ಅವರ ಮೂಲ ಉದ್ಯೋಗ ಬೇಟೆ ಆಡುವುದು ದುಸ್ತರವಾದಾಗ ಜೀವನೋಪಾಯಕ್ಕೆ ಸ್ಥಳೀಯವಾಗಿ ಕರಾವಳಿ ಪ್ರದೇಶದಲ್ಲಿ ಲಭ್ಯವಿದ್ದ ಮೀನುಗಾರಿಕೆ ಹಾಗೂ ಕರಾವಳಿ ಹೊರತುಪಡಿಸಿದ ಭಾಗದಲ್ಲಿ ಕೃಷಿಯಲ್ಲಿ ಕೂಲಿಯಾಳಾಗಿ ಉದ್ಯೋಗ ನಡೆಸತೊಡಗಿದರು.

ಈ ಸಮುದಾಯದ ಅಂದಿನ ಹೀನಸ್ಥಿತಿಯ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿದ ಭಟ್ಕಳ ಕ್ಷೇತ್ರದ ಅಂದಿನ ಶಾಸಕ ಎಸ್‌.ಎಂ. ಯಾಹ್ಯಾ ಅವರ ಪ್ರಯತ್ನದಿಂದ ಕೇಂದ್ರ ಸರಕಾರವು ಮೊಗೇರ ಜಾತಿಗೆ ಪ್ರಾದೇಶಿಕ ನಿರ್ಬಂಧನೆ ತೆಗೆದು ಪರಿಶಿಷ್ಟ ಜಾತಿ ಸೌಲಭ್ಯ ನೀಡಿತ್ತು. ಇವರಿಗೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವಂತೆ ಆದೇಶಿಸಿದೆ.

ಈ ಮೂಲಕ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡರೂ ಕೂಡ ಕರ್ನಾಟಕ ಸರಕಾರವು 2018ರಲ್ಲಿ ಗೊಂದಲಕಾರಿ ಸುತ್ತೋಲೆ ನೀಡಿದ್ದರೂ ಅದನ್ನು 2919ರಲ್ಲಿ ವಾಪಸ್‌ ಪಡೆದಿದೆ. ಆದಾಗ್ಯೂ ಉತ್ತರ ಕನ್ನಡ ಜಿಲ್ಲಾಡಳಿತವು ಉತ್ತರ ಕನ್ನಡ ಜಿಲ್ಲಾ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು. ಮೊಗೇರ ಜಾತಿಗೆ ತಡೆ ಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನು ವಿಳಂಬವಿಲ್ಲದೇ ಮುಂದುವರಿಸಬೇಕು.

ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸಮಾಜದವರ ವಿರುದ್ಧ ದಾಖಲಿಸಿದ ಕ್ರಿಮಿನಲ್‌ ಪ್ರಕರಣ ಹಿಂಪಡೆಯಬೇಕು, ಮೊಗೇರ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಲು ನೀಡಿದ ಅದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿತು. ಮಾಜಿ ಶಾಸಕ ವಿವೇಕಾನಂದ ವೈದ್ಯ, ಸುಮಾ ಉಗ್ರಾಣಕರ, ರಾಜು ಉಗ್ರಾಣಕರ, ಮಂಜು ಮೊಗೇರ, ಶಶಿಕಲಾ ಜೈವಂತ, ನಾಗರಾಜ ಮುರ್ಡೇಶ್ವರ  ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next