Advertisement

ಕಮಲ ಚಿಹ್ನೆಗೆ ಮತ ನೀಡುವಂತೆ ಮನವಿ

06:00 AM Nov 03, 2018 | Team Udayavani |

ಬೆಂಗಳೂರು: ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ  ಎಲ್‌.ಚಂದ್ರಶೇಖರ್‌ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್‌ ಸೇರಿದ ಬೆಳವಣಿಗೆಯಿಂದ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರು ಎದೆಗುಂದದಂತೆ ಮನವಿ ಮಾಡಿರುವ ಬಿಜೆಪಿ ನಾಯಕರು, ಕಮಲ ಚಿಹ್ನೆಗೆ ಮತ ಹಾಕುವ ಮೂಲಕ ಶಕ್ತಿ ಪ್ರದರ್ಶಿಸುವಂತೆ ಕೋರಿದ್ದಾರೆ. 

Advertisement

ಬಿಜೆಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಈ ಸಂಬಂಧ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮನವಿಪೂರ್ವಕ ಸಂದೇಶ ಹಾಕಿದ್ದಾರೆ. “ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರು ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಿರುವ ಆಸಕ್ತಿಕರ ಬೆಳವಣಿಗೆ ನಡೆದಿದೆ. ಕ್ಷೇತ್ರದಲ್ಲಿ ನೂರಾರು ಮಂದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಕಮಲದ ಚಿಹ್ನೆಗೆ ಮತ ನೀಡುವಂತೆ ಪ್ರಚಾರ ನಡೆಸುತ್ತಿದ್ದಾರೆ. ಇದು ಮುಂದಿನ 36 ಗಂಟೆಗಳಲ್ಲಿ ಸಕ್ರಿಯವಾಗಿ ನಡೆದು ಮತದಾನದ ಮೂಲಕ ಪ್ರತಿಬಿಂಬಿತವಾದರೆ ಎಲ್ಲರಿಗೂ ದೊಡ್ಡ ಪಾಠ ಕಲಿಸಿದಂತಾಗಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ತಲೆ ಬಾಗುತ್ತೇನೆ’ ಎಂದು ಸಂತೋಷ್‌ ಸಂದೇಶ ಹಾಕಿದ್ದಾರೆ. ಹಾಗೆಯೇ, ಅಭ್ಯರ್ಥಿ ಹೆಸರು
“ಹಿಂದುತ್ವ’, ಚಿಹ್ನೆ “ಕಮಲ’ಕ್ಕೆ ಮತಹಾಕುವ ಮೂಲಕ ನಂಬಿಕೆ ದ್ರೋಹಿಗಳಿಗೆ ರಾಮನಗರ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಪ್ರಕಟಿಸಿರುವ ಸಂದೇಶವನ್ನೂ ಸಂತೋಷ್‌ ಶೇರ್‌ ಮಾಡಿದ್ದಾರೆ. “ರಾಮನಗರ ಪ್ರಜಾತಂತ್ರ ಪ್ರೇಮಿಗಳಲ್ಲಿ ಒಂದು ಮನವಿ. ನೀವೆಲ್ಲರೂ ಕಮಲದ ಚಿಹ್ನೆಯ ಮುಂದಿರುವ ಬಟನ್‌ ಒತ್ತುವುದೇ ಇಂದಿನ
ಅನಿಷ್ಠ ವಿದ್ಯಮಾನಕ್ಕೆ ಬಲವಾದ ಉತ್ತರ. ದಯವಿಟ್ಟು ಕಮಲಕಕ್ಕೆ ನಿಮ್ಮ ಮತ’ ಎಂಬುದಾಗಿ ಸುರೇಶ್‌ ಕುಮಾರ್‌ ಸಂದೇಶ ಹಾಕಿದ್ದಾರೆ.

ರಾಮನಗರದ ಜನರಾದ ನಾವು ಪಕ್ಷಕ್ಕೆ ಮತ ನೀಡುತ್ತಿದ್ದೇವೆ: ಅಭ್ಯರ್ಥಿಗಳಿಗಲ್ಲ, ಅಭ್ಯರ್ಥಿ ಯಾರೇ ಇರಲಿ, ಇರದಿರಲಿ ನನ್ನ ಮತ ಬಿಜೆಪಿಗೆ, ನರೇಂದ್ರ ಮೋದಿಗೆ ಎಂಬ ಸಂದೇಶಗಳನ್ನು ವಾಟ್ಸ್‌ ಆ್ಯಪ್‌ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಶೇರ್‌ ಮಾಡುತ್ತಾ ಪಕ್ಷ ಬೆಂಬಲಿಸುವಂತೆ ಮನವಿ ಮಾಡುತ್ತಿರುವುದು ಕಂಡುಬಂದಿದೆ. 

ಚುನಾವಣಾ ಆಯೋಗಕ್ಕೆ ದೂರು: ಬಿಜೆಪಿಯಿಂದ “ಬಿ’ ಫಾರಂ ಪಡೆದು ಸ್ಪರ್ಧಿಸಿ ಮತದಾನಕ್ಕೆ 2 ದಿನ ಬಾಕಿಯಿರುವಾಗ ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ ಸೇರಿರುವ ಹಿನ್ನೆಲೆಯಲ್ಲಿ ರಾಮನಗರ ಉಪಚುನಾವಣೆ ಮತದಾನವನ್ನು
ಮುಂದೂಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾ. ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಸೇರಿ ಮುಖಂಡರು ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ. ಅಶ್ವತ್ಥ ನಾರಾಯಣ, ಸಚ್ಚಿದಾನಂದಮೂರ್ತಿ, ವಿವೇಕ್‌ರೆಡ್ಡಿ, ಗಣೇಶ್‌ ಇತರರು ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.

Advertisement

ಬಿಜೆಪಿಯಿಂದ  ಸ್ಪರ್ಧಿಸಿದ್ದ ಎಲ್‌.ಚಂದ್ರಶೇಖರ್‌ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಬಾವುಟ ಹಿಡಿದು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಆ ಮೂಲಕ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಕೊನೆಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿರುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಚಂದ್ರಶೇಖರ್‌, ಡಿ.ಕೆ.ಸುರೇಶ್‌, ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಬೇಕು. ಉಪಚುನಾವಣೆಯನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಕೋರಲಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಗುರುವಾರವೇ ಆನ್‌ ಲೈನ್‌ನಲ್ಲಿ ದೂರು ಸಲ್ಲಿಸಲಾಗಿದೆ. ಒಂದೊಮ್ಮೆ ಉಪಚುನಾವಣೆ ಮುಂದೂಡದಿದ್ದರೆ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಚಿ.ನಾ.ರಾಮು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next