ಆಳಂದ: ಅಮರ್ಜಾ ಅಣೆಕಟ್ಟೆ ಕೆಳಭಾಗದ ಹೊಲಗಳಿಗೆ ಕಾಲುವೆ ಮೂಲಕ ನೀರು ಹರಿಸಿ ಜನ ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ನೇತೃತ್ವದ ರೈತರ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಭೀಕರ ಬೇಸಿಗೆ ಎದುರಾಗಿದ್ದು ಕೆಳಭಾಗದ ಧಂಗಾಪುರ ಗ್ರಾಮದ ಸುತ್ತಮುತ್ತಲಿನ ಭೂಸನೂರ, ಬಟ್ಟರಗಾ, ನಿಂಬರಗಾ, ದೇವಂತಗಿ ಗ್ರಾಮಗಳಲ್ಲಿ ಜನ ಜಾನುವಾರುಗಳು ನೀರಿನ ತೋಂದರೆ ಎದುರಿಸುವಂತಾಗಿದೆ. ಹೀಗಾಗಿ ಬತ್ತಿದ ಹಳ್ಳದ ಮೂಲಕ ಹಾಗೂ ಕಾಲುವೆ ಮೂಲಕ ನೀರು ಹರಿಸಿದರೆ ಬೇಸಿಗೆ ಬೆಳೆಗಳಿಗೆ ಮತ್ತು ದನಕರುಗಳಿಗೆ ಅನುಕೂಲವಾಗುತ್ತದೆ ಎಂದು ನಿಯೋಗವು ಮನವಿ ಸಲ್ಲಿಸಿದೆ.
ನಿಯೋಗದಲ್ಲಿದ್ದ ಕೃಷಿಕ ಸಮಾಜದ ಅಧ್ಯಕ್ಷ ಡಾ| ಸಿದ್ರಾಮಪ್ಪ ಪಾಟೀಲ, ನಾನು ಸ್ವತಃ ಸ್ಥಳಕ್ಕೆ ಭೇಟಿ ನೀಡಿದ್ದು, ಹಳ್ಳ ಬತ್ತಿಹೋಗಿದೆ. ದನಕರುಗಳಿಗೆ ನೀರು ಬಿಟ್ಟರೆ ಅನುಕೂಲವಾಗುತ್ತದೆ. ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಲಭ್ಯವಿದೆ. ಕಾಲುವೆ ಮತ್ತು ಹಳ್ಳಕ್ಕೆ ನೀರು ತಕ್ಕಮಟ್ಟಿಗೆ ಹರಿಬಿಟ್ಟರೆ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ವೇಳೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ದೇವಿಂದ್ರಪ್ಪ ಮೇಲ್ಕೇರಿ ಗ್ರಾಪಂ ಸದಸ್ಯ ಚಂದ್ರು ಅಲ್ದಿ ಇತರ ಸದಸ್ಯರು ಮತ್ತು ರೈತರು ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಅಣೆಕಟ್ಟೆಯ ನೀರಿನ ಸಾಧಕ ಬಾಧಕವನ್ನು ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ನಿಯೋಗದ ಮುಖಂಡರಿಗೆ ಅವರು ಭರವಸೆ ನೀಡಿದರು.
ಬಳಿಕ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದ ನಿಯೋಗವು ರೈತರ ಪಂಪಸೆಟ್‌ಗಳಿಗೆ ಇರುವ ಟ್ರಾನ್ಸಾಫಾರ್‌ಗಳು ಪದೇ ಪದೇ ಸುಟ್ಟು ಹಾಳಾಗುತ್ತಿದೆ. ಇದರಿಂದ ಕೃಷಿ ಬೆಳೆ ಬೆಳೆಯದೆ ರೈತರಿಗೆ ಮತ್ತು ಜೆಸ್ಕಾಂಗೂ ಹಾನಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯುತ್ ಟ್ರಾನ್ಸಫಾರಂಗಳನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.