ರಾಮದುರ್ಗ: ಪಟ್ಟಣದ ಹಳೇ ಪೊಲೀಸ್ ಠಾಣೆಯಿಂದ ಪೂರ್ವದ ಪಂಚಕಟ್ಟಿಮಠ ಪೆಟ್ರೋಲ್ ಬಂಕ್‌ವರೆಗಿನ ರಸ್ತೆಗೆ ಡಾ| ಬಾಬಾಸಾಹೇಬ ಅಂಬೇಡ್ಕರ್ ರಸ್ತೆ ಎಂದು ನಾಮಕರಣಗೊಂಡಿದ್ದು, ಈ ವ್ಯಾಪ್ತಿಯಲ್ಲಿ ಬರುವ ಎಲ್ಲ ವ್ಯಾಪಾರಿ ಮಳಿಗೆಗಳ ನಾಮಫಲಕದಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ್ ರಸ್ತೆ ಎಂದು ನಮೂದಿಸಲು ಪುರಸಭೆಯವರು ಕ್ರಮ ಕೈಕೊಳ್ಳಬೇಕು ಎಂದು ಪರಿಶಿಷ್ಟ ಜನಾಂಗದ ಮುಖಂಡರು ಒತ್ತಾಯಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಜರುಗಿದ ತ್ತೈಮಾಸಿಕ ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಪರಿಶಿಷ್ಟ ಜನಾಂಗದ ಮುಖಂಡರು, ಎಲ್ಲ ವ್ಯಾಪಾರಿ ಮಳಿಗೆಗಳ ಮಾಲೀಕರಿಗೆ ನೋಟೀಸು ಜಾರಿ ಮಾಡುವುದಲ್ಲದೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಿನಿ ವಿಧಾನಸೌಧದ ಮುಂಭಾಗದ ರಸ್ತೆಯ ಮಧ್ಯದಲ್ಲಿ ಡಾ| ಬಾಬಾ ಸಾಹೇಬ ಅಂಬೇಡ್ಕರರ ಪ್ರತಿಮೆ ಸ್ಥಾಪಿಸಲು ಹಲವಾರು ಸಭೆಗಳಲ್ಲಿ ಚರ್ಚೆಯಾಗಿದೆ. ಆದರೆ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತ್ವರಿತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.
ಮೂರು ತಿಂಗಳಿಗೊಮ್ಮೆ ನಡೆಯುವ ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಗೆ ತಾಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು ಆಗಮಿಸಿ, ತಮ್ಮ ಇಲಾಖೆಯ ಯೋಜನೆಗಳನ್ನು ತಿಳಿಸಬೇಕು. ದಲಿತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನಿರ್ವಹಿಸಬೇಕು. ಅದನ್ನು ಬಿಟ್ಟು ಇಲಾಖಾ ಮುಖ್ಯಸ್ಥರು ಸಭೆಗೆ ಹಾಜರಾಗದೇ ತಮ್ಮ ಸಿಬ್ಬಂದಿಯನ್ನು ಸಭೆಗೆ ಕಳಿಸುವುದನ್ನು ಆಕ್ಷೇಪಿಸಿದ ಪರಿಶಿಷ್ಟ ಜನಾಂಗ ನಾಯಕರು, ಮುಂದಿನ ಸಭೆಗೆ ಇಲಾಖಾ ಮುಖ್ಯಸ್ಥರು ಆಗಮಿಸದಿದ್ದರೆ ಸಭೆ ಬಹಿಷ್ಕರಿಸುವ ಬೆದರಿಕೆ ಹಾಕಿದರು.
ಪಟ್ಟಣದ ಗಡದಗಲ್ಲಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರಕಾರಿ ಖುಲ್ಲಾ ಜಾಗದಲ್ಲಿ ಅಲ್ಲಿನ ಪರಿಶಿಷ್ಟರು ಡಾ| ಬಾಬು ಜಗಜೀವನ್ ರಾಮ್ ಮತ್ತು ಅಂಬೇಡ್ಕರರ ಭಾವಚಿತ್ರ ಇಟ್ಟು ಪೂಜಿಸುತ್ತಿದ್ದರು. ಆದರೆ ಕೆಲವರು ಅಲ್ಲಿ ಅಕ್ರಮ ಶೆಡ್ ಹಾಕಿಕೊಂಡಿರುವುದು ಅಲ್ಲಿನವರಿಗೆ ಕಷ್ಟವಾಗಿದೆ. ಪುರಸಭೆಯು ಕೇವಲ 7 ದಿನಗಳಲ್ಲಿ ಶೆಡ್ ತೆರವುಗೊಳಿಸುವುದಾಗಿ ಹೇಳಿ ಮಾತಿಗೆ ತಪ್ಪಿದೆ. ತ್ವರಿತವಾಗಿ ಅಕ್ರಮ ಶೆಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ನೂತನ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಪರಿಶಿಷ್ಟ ಜನಾಂಗ ಮುಖಂಡರು ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ, ಕಳೆದ ಹತ್ತು ವರ್ಷಗಳಲ್ಲಿ ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಯು ಕಾಟಾಚಾರದ ಸಭೆಯಾಗಿ ಮಾರ್ಪಟ್ಟಿದ್ದು, ಇನ್ನು ಮುಂದೆ ಹಾಗಾಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಿ ದಲಿತರ ಸಭೆಗಳಿಗೆ ಕಡ್ಡಾಯವಾಗಿ ಇಲಾಖಾ ಮುಖ್ಯಸ್ಥರು ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು. ಪುರಸಭೆ ಅಧ್ಯಕ್ಷ ಅಶೋಕ ಸೂಳಭಾವಿ, ಸದಸ್ಯ ಬಸಪ್ಪ ಮಾದರ, ತಹಶೀಲ್ದಾರ ವಿಜಯಕುಮಾರ ಕಡಕೋಳ, ತಾಪಂ ಇಒ ಆರ್.ವಿ. ನಿಡೋಣಿ ಇತರರು ವೇದಿಕೆ ಮೇಲಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್. ಕರ್ಕಿ ಸಭೆ ನಿರ್ವಹಿಸಿದರು.