ರಾಯಚೂರು: ನಗರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನಗರಸಭೆ ಬಜೆಟ್‌ನಲ್ಲಿ ವೈದ್ಯಕೀಯ ವೆಚ್ಚಕ್ಕೆ 25 ಲಕ್ಷ ರೂ. ಅನುದಾನ ಮೀಸಲಿಡುವಂತೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ನಗರಸಭೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2022-2023ನೇ ಸಾಲಿನ ಆಯ್ಯವಯ ಮಂಡನೆ ಪೂರ್ವಭಾವಿ ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ನಗರದಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ, ಸುದ್ದಿ ಕಚೇರಿಗಳಲ್ಲಿ ಸುಮಾರು 100 ಜನ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತೀವ್ರ ತ್ವರದ ಆರೋಗ್ಯದ ಸಮಸ್ಯೆ ಎದುರಾಗ ವೈದ್ಯಕೀಯ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ ನಗರಸಭೆಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸುವ 25 ಲಕ್ಷ ರೂ. ಮೀಸಲಿಡಬೇಕು ಎಂದು ತಿಳಿಸಲಾಯಿತು.
ಬೇರೆ ಜಿಲ್ಲೆಗಳಲ್ಲಿ ನಗರಸಭೆಗಳಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ ಅನುದಾನ ನೀಡಿರುವ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ರಾಯಚೂರು ನಗರಸಭೆ ಕೂಡ ಪತ್ರಕರ್ತರಿಗೆ ನೆರವಿಗೆ ಬರಬೇಕು ಎಂದು ಒತ್ತಾಯಿಸಲಾಯಿತು.
ಪೌರಾಯುಕ್ತ ಮುನಿಸ್ವಾಮಿ, ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಬಸವರಾಜ ನಾಗಡದಿನ್ನಿ, ಆರ್.ಗುರುನಾಥ, ಜಗ್ನನಾಥ ದೇಸಾಯಿ, ಕೆ.ಸತ್ಯನಾರಾಯಣ, ವೆಂಕಟೇಶ್ ಹೂಗಾರ, ಜಗ್ನನಾಥ ಪೂಜಾರಿ, ಜಯಕುಮಾರ ದೇಸಾಯಿ, ಸಣ್ಣ ಈರಣ್ಣ, ರಾಚಯ್ಯ ಸ್ವಾಮಿ, ಬಾಬಾ ಹಟ್ಟಿ, ಕ್ಯಾಮರಮಾನ್ ದುರ್ಗೇಶ್ ಸೇರಿ ಇತರರಿದ್ದರು.