Advertisement

ಬಡವರಿಗೆ ಮನೆ ಕಟ್ಟಲು ಮರಳು ಒದಗಿಸಲು ಮನವಿ

10:14 PM Sep 15, 2019 | Sriram |

ಬೆಳ್ತಂಗಡಿ: ತಾ|ನಲ್ಲಿ ಬಡವರಿಗೆ ಸರಕಾರದಿಂದ ಮನೆ ಮಂಜೂರಾಗಿದ್ದರೂ ಮರಳಿನ ಸಮಸ್ಯೆಯಿಂದಾಗಿ ನಿರ್ಮಾಣ ಅಸಾಧ್ಯವಾಗಿದೆ. ಗ್ರಾಮ ಮಟ್ಟದಲ್ಲಿ ನದಿ ಗಳಿಂದ ಮರಳು ತೆಗೆಯಲು ಕಾನೂನು ರೀತ್ಯಾ ಅವಕಾಶ ನೀಡಬೇಕು ಎಂದು ದಸಂಸ ಮುಖಂಡ ವೆಂಕಣ್ಣ ಕೊಯ್ಯೂರು ಮನವಿ ಮಾಡಿದರು.

Advertisement

ದ.ಕ. ಜಿಲ್ಲಾ ಪೊಲೀಸ್‌ ಇಲಾಖೆ ವತಿ ಯಿಂದ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಲಕ್ಷ್ಮೀಪ್ರಸಾದ್‌ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಅಂಬೇಡ್ಕರ್‌ ಭವನದಲ್ಲಿ ರವಿವಾರ ನಡೆದ ಜಿಲ್ಲಾಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಅವರು ವಿಷಯ ತಿಳಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶೇಖರ ಲಾೖಲ, ನೆರೆಯಿಂದಾಗಿ ನದಿಗಳಲ್ಲಿ ಶೇ. 60ರಷ್ಟು ಮರಳು ಹಾಗೂ ಚರಳು ತುಂಬಿಕೊಂಡಿದೆ. ಇನ್ನು ಮಳೆ ಬಂದರೆ ಇದಕ್ಕಿಂತಲೂ ನೆರೆ ಜಾಸ್ತಿಯಾಗಿ ಆಸ್ತಿ-ಪಾಸ್ತಿಗಳಿಗೆ ನಷ್ಟ ಸಂಭವಿಸಬಹುದು. ಈಗ ನದಿಗಳಲ್ಲಿ ತುಂಬಿ ಕೊಂಡಿರುವ ಮರಳು ಹಾಗೂ ಚರಳನ್ನು ತೆರವು ಮಾಡುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕಾಗಿದೆ ಎಂದರು.

ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸ ಲಾಗುವುದು ಎಂದು ಎಸ್‌ಪಿ ತಿಳಿಸಿದರು.

ಸವಾರರನ್ನು ಅಪರಾಧಿಗಳಂತೆ ಕಾಣುತ್ತಿದ್ದಾರೆ
ಸರಕಾರದ ಹೊಸ ಕಾನೂನು ನೆಪದಲ್ಲಿ ಪೊಲೀಸರು ವಾಹನ ಸವಾರರನ್ನು ಅಪ ರಾಧಿಗಳಂತೆ ಬೆನ್ನಟ್ಟಿಕೊಂಡು ಹಿಡಿದು ದಂಡ ವಸೂಲಿ ಮಾಡುತ್ತಿದ್ದಾರೆ. ಇದರ ಕುರಿತು ಕ್ರಮ ಕೈಗೊಳ್ಳುವಂತೆ ವಿಶ್ವನಾಥ್‌ ಚಂಡ್ತಿಮಾರ್‌ ಹಾಗೂ ಅನಂತ ಮುಂಡಾಜೆ ಪ್ರಸ್ತಾವಿಸಿದರು. ಅಪಘಾತ ನಡೆದು ಸಾವು- ನೋವು ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಪೊಲೀಸರು ಅತಿರೇಕ ವಾಗಿ ವರ್ತಿಸಿದರೆ ಮೇಲಧಿಕಾರಿಗಳಿಗೆ ದೂರು ನೀಡಿ ಎಂದು ಎಸ್‌ಪಿ ತಿಳಿಸಿದರು.

Advertisement

ಅರಣ್ಯವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ
ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ಆದಿವಾಸಿಗಳ ಸಮಸ್ಯೆಯನ್ನು ಬಿಡಿಸಿಟ್ಟ ದಲಿತ ಮುಖಂಡ ಶೇಖರ ಲಾೖಲ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಅವಕಾಶ ನೀಡುವುದಿಲ್ಲ. ಯಾವುದಾದರೂ ನೆಪ ಹೇಳಿ ಅದನ್ನು ತಡೆಯುತ್ತಾರೆ. ಸರಕಾರದ ಇಲಾಖೆಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಅರಣ್ಯದ ಒಳಗೆ ವಾಸಿಸುತ್ತಿರುವ ಆದಿವಾಸಿ ಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು. ಈಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಲಾೖಲ ಗ್ರಾಮದ ಅಂಬೇಡ್ಕರ್‌ ಕಾಲನಿಗೆ ಸಂಪರ್ಕಿಸುವ ಕಿರುಸೇತುವೆ ಮುರಿದಿದ್ದು, ಅಪಾಯ ಸ್ಥಿತಿಯಲ್ಲಿದೆ. 2013ರಲ್ಲಿ ಗ್ರಾ.ಪಂ.ಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದಸಂಸ ಮುಖಂಡ ನಾಗರಾಜ ಎಸ್‌.ಲಾೖಲ ಪ್ರಸ್ತಾವಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಗ್ರಾ.ಪಂ. ಪಿಡಿಒ ಅವರಿಗೆ ಸೂಚಿಸುವುದಾಗಿ ತಿಳಿಸಿದರು.

ಅನ್ನಾರು ಕಾಲನಿಗೆ ಬೇಕು ಸಂಪರ್ಕ
ನೆರೆಯಿಂದ ಅನ್ನಾರು ಮಲೆಕುಡಿಯ ಕಾಲನಿಯ ಸಂಪರ್ಕ ಸೇತುವೆ ಕೊಚ್ಚಿಹೋಗಿದ್ದು, ಇದರಿಂದ ಈ ಭಾಗದ ಜನರು ಸಂಕಷ್ಟದಲ್ಲಿದ್ದಾರೆ. ಒಂದು ತಿಂಗಳಾದರೂ ನದಿ ದಾಟಲು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ನಿವಾಸಿ ಸುಂದರ ಮಲೆಕುಡಿಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗದೆ ನಿಧನ ಹೊಂದಿದ್ದಾರೆ. ತತ್‌ಕ್ಷಣ ಅನ್ನಾರಿಗೆ ಸೌಕರ್ಯ ಒದಗಿಸಿಕೊಡಬೇಕು ಎಂದು ಮುಖಂಡರು ಆಗ್ರಹಿಸಿದರು. ಜಿಲ್ಲಾಡಳಿತದ ಜತೆ ಮಾತನಾಡಿ ತುರ್ತು ವ್ಯವಸ್ಥೆ ನೀಡುವುದಾಗಿ ಎಸ್‌ಪಿ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಗಂಗಾಧರ ಬಂಟ್ವಾಳ, ರಾಘವ ಕಲ್ಮಂಜ, ಕೂಸ ಅಳದಂಗಡಿ, ರಮೇಶ್‌ ಗಮನಸೆಳೆದರು. ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ. ನಿರ್ವಹಿಸಿದರು. ಜಿಲ್ಲೆಯ ವಿವಿಧ ತಾಲೂಕಿನ ವೃತ್ತ ನಿರೀಕ್ಷಕರು, ಎಸ್‌ಐಗಳು ಉಪಸ್ಥಿತರಿದ್ದರು.

ಎಸ್‌ಪಿ ಕಚೇರಿ
ಸ್ಥಳಾಂತರ ಬೇಡ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಪುತ್ತೂರಿಗೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿರುವುದು ಸರಿಯಲ್ಲ. ಜಿಲ್ಲಾಮಟ್ಟದ ಇಲಾಖೆಗಳು ಮಂಗಳೂರಿನಲ್ಲೇ ಇರುವುದರಿಂದ ಇದನ್ನು ಮಂಗಳೂರಿನಲ್ಲೇ ಉಳಿಸಿಕೊಳ್ಳಬೇಕು ಎಂದು ಅನಂತ ಮುಂಡಾಜೆ ಆಗ್ರಹಿಸಿದರು. ಬಂಟ್ವಾಳದ ವಿಶ್ವನಾಥ್‌ ಚಂಡ್ತಿಮಾರ್‌ ಧ್ವನಿಗೂಡಿಸಿದರು. ಈ ಕುರಿತು ಸರಕಾರಕ್ಕೆ ಸಭೆಯ ನಿರ್ಣಯವನ್ನು ನೀಡಲಾಗುವುದು ಎಂದು ಎಸ್‌ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next