ಹೊಸಪೇಟೆ: ಕೋವಿಡ್-19ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ದರ ನಿಗದಿಪಡಿಸಿರುವುದನ್ನು ಹಿಂಪಡೆಯುವ ಮೂಲಕ ಕಡ್ಡಾಯ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ, ಡಿವೈಎಫ್‌ಐ ತಾಲೂಕು ಸಮಿತಿ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸರಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಸರ್ಕಾರಿ ಆಸ್ಪತ್ರೆಗಳು ಅಗತ್ಯ ಡಾಕ್ಟರ್-ಸಿಬ್ಬಂದಿ ಕೊರತೆ, ಔಷಧ ಸೇರಿದಂತೆ ಮೂಲ ಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ಸಾಮಾನ್ಯ ಜನತೆಗೆ ಉತ್ತಮ ಆರೋಗ್ಯ ಲಭಿಸದೆ ಖಾಸಗಿ ಆಸ್ಪತ್ರೆಗಳ ಧನದಾಹಿಕೊರೆತಕ್ಕೆ ಬಲಿಯಾಗುತ್ತಿದ್ದಾರೆ. ಈ ಸ್ಥಿತಿಯಲ್ಲಿ ಕೋವಿಡ್ -19 ರೋಗ ಜನ ಸಾಮಾನ್ಯನ ಪಾಲಿಗೆ ಕಂಟಕ ಪ್ರಾಯವಾಗಿದೆ.
ಇಂತಹ ಗಂಭೀರ ಸ್ಥಿತಿಯಲ್ಲಿ ಕೋವಿಡ್-19 ಸೋಂಕಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳನ್ನು ಡಾಕ್ಟರ್, ಸಿಬ್ಬಂದಿ, ಔಷಧ ಇತರೆ ಸಕಲ ರೀತಿಯಲ್ಲಿಯೂ ಸಜ್ಜುಗೊಳಿಸಬೇಕು. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಆದರೆ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ 10 ಸಾವಿರ, ಆಮ್ಲಜನಕ ಸಹಿತ ವಾರ್ಡ್‌ನಲ್ಲಿ 12 ಸಾವಿರ ಐಸಿಯು ಹಾಸಿಗೆ 15 ಸಾವಿರ ವೆಂಟಿಲೇಟರ್ ಸಹಿತ ಐಸಿಯುಗೆ 25 ಸಾವಿರ ದರ ನಿಗದಿಗೊಳಿಸಿದೆ. ಈ ದರಗಳು ಬಡಜನರಿಗೆ ಹೊರೆಯಾಗಲಿದೆ ಎಂದು ಅಳಲು ತೋಡಿಕೊಂಡರು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಸಾಮಾನ್ಯ ವಾರ್ಡ್ ಗೆ 5200 ರೂ ಆಮ್ಲಜನಕ ಸಹಿತ ವಾರ್ಡ್ ಗೆ 7000 ರೂ. ತೀವ್ರ ನಿಗಾ ಘಟಕಕ್ಕೆ 8500 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ 10000 ರೂ ನಿಗದಿಗೊಳಿಸಿದೆ. ಆದರೆ ಗ್ರಾಮೀಣ ನಗರ ಪ್ರದೇಶದ ಬಹುತೇಕ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಿಂದ ದೂರ ಉಳಿದಿದ್ದಾರೆ. ಈಗಾಗಲೇ ಲಾಕ್‌ಡೌನ್ ಸಂಕಷ್ಠrದಲ್ಲಿರುವ ಬಡ-ಮಧ್ಯಮ, ವರ್ಗದ ಕುಟುಂಬಗಳಿಗೆ ದುಬಾರಿ ಚಿಕಿತ್ಸೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಇದನ್ನು ರದ್ದುಗೊಳಿಸಿ ಕೋವಿಡ್ ಸೋಂಕಿತರೆಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬೇಕಾದ ಸಕಲ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಸರಕಾರದ ವಶಕ್ಕೆ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಡಿವೈಎಫ್‌ಐ ಮುಖಂಡರು ತಿಳಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್, ಜಿಲ್ಲಾಧ್ಯಕ್ಷ ವಿ. ಸ್ವಾಮಿ, ತಾಲೂಕು ಅಧ್ಯಕ್ಷ ಕಿನ್ನಾಳ್ ಹನುಮಂತ, ಮುಖಂಡರಾದ ಕೆ.ಎಂ. ಸಂತೋಷ, ಕಲ್ಯಾಣಯ್ಯ, ಈ. ಮಂಜುನಾಥ, ಬಂಡೆ ತಿರುಕಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.