ಶಹಾಪುರ: ನಗರದ ವಾರ್ಡ್ ಸಂಖ್ಯೆ 26ರಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಸೌಕರ್ಯ ಇಲ್ಲದ ಕಾರಣ ವಾರ್ಡ್ ನಿವಾಸಿಗಳು ಬಯಲು ಶೌಚಕ್ಕೆ ಹೋಗುವ ಚಂಬು ಸಮೇತ ನಗರಸಭೆಗೆ ಆಗಮಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಾರ್ಡ್ ಸಂಖ್ಯೆ 26ರಲ್ಲಿ ಮೂಲ ಸೌಕರ್ಯ ಇಲ್ಲದೆ ಜನರು ಪರದಾಡುವಂತಾಗಿದೆ. ಮೂರು ದಿನಗಳಿಗೊಮ್ಮೆ ನಲ್ಲಿ ನೀರು ಬಿಡಲಾಗುತ್ತಿದೆ. ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಮಹಿಳೆಯರು ನಗರಸಭೆಗೆ ಹಿಡಿಶಾಪ ಹಾಕಿದರು.
ಚರಂಡಿ, ಬೀದಿ ದೀಪ, ರಸ್ತೆ ದುರಸ್ತಿಯೂ ಮರೀಚಿಕೆಯಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಕಲ್ಪಿಸಲು ಕಳೆದ ವರ್ಷದಿಂದ ಮನವಿ ಮಾಡುತ್ತ ಬರಲಾಗುತ್ತಿದೆ. ಯಾವೊಬ್ಬ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ಕೂಡಲೇ ಮೂಲ ಸೌಲಭ್ಯ ಕಾಮಗಾರಿ ಕೈಗೆತ್ತಿಕೊಳ್ಳುವವರೆಗೆ ನಗರಸಭೆ ಮುಂದೆಯೇ ಅಹೋರಾತ್ರಿಯಾದರೂ ಪರವಾಗಿಲ್ಲ ನಿರಂತರ ಧರಣಿ ನಡೆಸುತ್ತೇವೆ ಎಂದು ಹಠ ಹಿಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಓಂಕಾರ ಪೂಜಾರಿ ಧರಣಿ ನಿರತ ಮಹಿಳೆಯರೊಂದಿಗೆ ಮಾತನಾಡಿ, ವಾರ್ಡ್‌ಗೆ ತೆರಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ನಗರಸಭೆಗೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸೂಕ್ತ ಜಾಗ ವ್ಯವಸ್ಥೆ ಮಾಡಿಕೊಂಡು ಮಹಿಳೆಯರಿಗೆ ಮೊದಲು ಸಾರ್ವಜನಿಕ ಶೌಚಾಲಯ ಕಟ್ಟಡ ಕಟ್ಟುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು.
ನಗರಸಭೆ ಸದಸ್ಯ ಅಶೋಕ ನಾಯಕ, ಅಪ್ಪಣ್ಣ ದಶವಂತ ಮುಖಂಡರಾದ ಮೌನೇಶ ಹಳಿಸಗರ, ಬಸವರಾಜ ರತ್ತಾಳ ಸೇರಿದಂತೆ ನಿವಾಸಿಗಳಾದ ಭಾಗಮ್ಮ, ಭೀಮವ್ವ, ಮಲ್ಲಮ್ಮ ಬಂದಳ್ಳಿ, ಅಂಬಪ್ಪ ದರ್ಶನಾಪುರ, ಗೌರಮ್ಮ ನರಿ, ಭೀಮವ್ವ ಕಾಡಂಗೇರಿ, ಶಾಂತಮ್ಮ ತಳವಾರ, ಅವಮ್ಮ ಚಂಡು, ದೇವಮ್ಮ, ಶಾಂತಮ್ಮ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.