ರಾಮದುರ್ಗ: ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.
ಸರಕಾರ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರ ಫಸಲು ಬಂದ ಸಮಯಕ್ಕೆ ಖರೀದಿ ಕೇಂದ್ರಗಳನ್ನು ತೆರೆಯದೇ ಬೇಕಾಬಿಟ್ಟಿಯಾಗಿ ನಂತರ ಕಾಟಾಚಾರಕ್ಕೆ ಎಂಬಂತೆ ಖರೀದಿ ಕೇಂದ್ರ ತೆರೆಯುತ್ತಿರುವುದು ನಿಜಕ್ಕೂ ರೈತ ವಿರೋಧಿ ಧೋರಣೆಯಾಗಿದೆ. ಪ್ರವಾಹ, ಮಳೆಯಿಂದಾಗಿ ರೈತರ ಅನೇಕ ಬೆಳೆಗಳು ನೆಲಕಚ್ಚಿ ಹೋಗಿವೆ. ಅಲ್ಪಸ್ವಲ್ಪ ಗೋವಿನಜೋಳದ ಬೆಳೆ ಮಾತ್ರ ಉಳಿದಿದ್ದು,ಅದಕ್ಕೂ ಸಹ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೇ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಮುಂಗಾರು ಹಂಗಾಗಮಿನಲ್ಲಿ ರೈತರು ಬೆಳೆದ ಗೋವಿನ ಜೋಳಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಕೇವಲ 1000-1200 ದರ ಇದೆ. ಸರಕಾರ 1750 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾಗಿ ಘೋಷಣೆ ಮಾಡಿದ್ದು, ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಕುಂಟು ನೆಪ ಹೇಳಿ ಖರೀದಿ ಕೇಂದ್ರ ತೆರೆಯಲು ಹಿಂದೇಟು ಹಾಕಿದಲ್ಲಿ ರೈತ ಸಂಘ ಹಾಗೂ ಸಮಗ್ರ ರೈತ ಸಮುದಾಯದ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ರಾಮದುರ್ಗ, ತಾಲೂಕಾಧ್ಯಕ್ಷ ಜಗದೀಶದೇವರಡ್ಡಿ, ಮುಖಂಡರಾದ ಚನ್ನಬಸವರಾಜ ಕುಲಕರ್ಣಿ, ಈರಣ್ಣ ರಾಜನಾಳ, ಯಲ್ಲಪ್ಪ
ದೊಡಮನಿ, ಹಣಮಂತ ರಾಮನ್ನವರ, ಯಲ್ಲಪ್ಪ ದೊಡಮನಿ, ಕೃಷ್ಣಗೌಡ ಪಾಟೀಲ,ದ್ಯಾಮನ್ನ ಪೊತೆನ್ನವರ, ಶಿವನಗೌಡ ನಾಡಗೌಡ, ಮೇಗಪ್ಪ ಲಮಾಣಿ ಸೇರಿದಂತೆ ಇತರರಿದ್ದರು.