ಗದಗ: ಸರಕಾರಿ ನೌಕರರಿಗೆ ಮಾರಕವಾಗಿರುವ ಎನ್‌ಪಿಎಸ್(ರಾಷ್ಟ್ರೀಯ ಪೆನ್ಶನ್ ಸ್ಕೀಮ್) ರದ್ದುಗೊಳಿಸುವಂತೆ ಆಗ್ರಹಿಸಿ ಎನ್‌ಪಿಎಸ್ ನೌಕರರು ನಗರದಲ್ಲಿ ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’,’ ಎನ್ ಪಿಎಸ್ ಹಠಾವೋ ನೌಕರ ಬಚಾವೋ’ ಎಂಬ ಘೋಷಣೆಗಳೊಂದಿಗೆ ಕೂಗಿ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಇಲ್ಲಿನ ಕೆ.ಸಿ.ರಾಣಿ ರಸ್ತೆಯಲ್ಲಿರುವ ದುಂಡಪ್ಪ ಮಾನ್ವಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂರಾರು ಎನ್‌ಪಿಎಸ್ ನೌಕರರು ರಕ್ತದಾನ ಮಾಡಿ, ಸರಕಾರದ ವಿರುದ್ಧ ಹೋರಾಟದ ಕಹಳೆ ಊದಿದರು. ನೂತನ ಪಿಂಚಣಿ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ. ಎನ್‌ಪಿಎಸ್‌ನಲ್ಲಿರುವ ಅವೈಜ್ಞಾನಿಕ ಅಂಶಗಳಿಂದ ಸರಕಾರಿ ನೌಕರರು ತೊಂದರೆಗೊಳಗಾಗುವಂತಾಗಿದೆ. ಮರಣ ಹೊಂದಿದ ನೌಕರರ ಅವಲಂಬಿತರಿಗೆ ಸಮರ್ಪಕವಾಗಿ ಪಿಂಚಣಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಿಂಚಣಿ ಯೋಜನೆಯನ್ನು ಷರತ್ತು ರಹಿತವಾಗಿ ಸಂಪೂರ್ಣ ಹೊರತರಲು ಹಾಗೂ ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಕ್ತದಾನಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ್ ಮಾತನಾಡಿ, 2006ರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿ ಯೋಜನೆ ರದ್ದುಪಡಿಸಿ, ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ. ಈ ಅವೈಜ್ಞಾನಿಕ ಪಿಂಚಣಿ ಯೋಜನೆಯಿಂದ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಅನೇಕ ಸಮಸ್ಯೆಗಳಿಂದ ಎನ್‌ಪಿಎಸ್ ನೌಕರರು ಮರಣ ಹೊಂದಿದ್ದು, ಅವರ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಎನ್‌ಪಿಎಸ್ ಪಿಂಚಣಿ ಯೋಜನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಮಾತನಾಡಿದರು. ಎನ್ ಪಿಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಕೆ. ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶಗೌಡ ಪಾಟೀಲ, ಕೆ.ಎಫ್. ಹಳ್ಯಾಳ, ವಿ.ಬಿ. ಪೊಲೀಸ್‌ಪಾಟೀಲ, ಎಸ್.ಎಂ. ಪಾಟೀಲ, ಎಸ್.ಸಿ. ನಾಗರಳ್ಳಿ, ನಾಗರಾಜ ಸಂಕಣ್ಣವರ, ವಿ.ಜಿ. ಖೋಟೆ, ಡಿ.ಎಸ್. ತಳವಾರ, ಎಸ್.ಆರ್. ಕೋಣಿಮನಿ, ದೇವರಡ್ಡಿ ಸೋಮಣ್ಣವರ, ಎಂ.ಜೆ. ನದಾಫ, ಮಹ್ಮದಇಸ್ಮಾಯಿಲ್ ನದಾಫ್, ಶಿವಮೂರ್ತಿ ಲಿಂಗಶೆಟ್ಟರ, ಅಂದಾನಯ್ಯ ಮಠದ, ನಾಗರಾಜ ಸುರಕೋಡ, ಯೋಗೇಶ ನಾಟಗಾರ, ಫಕ್ರುಸಾಬ್ ಪಿಂಜಾರ, ಅಬ್ದುಲ್ ಶಿರಹಟ್ಟಿ, ಶಿವು ನಡಕಟ್ಟಿ, ಅಲ್ಲಾಭಕ್ಷಿ ಜವುಳಗೇರಿ ಇತರರು ಇದ್ದರು.