Advertisement

ಬಿಎಸ್ಸೆನ್ನೆಲ್‌ ಗುತ್ತಿಗೆ ನೌಕರರಿಂದ ಸಚಿವರಿಗೆ ಮನವಿ

11:31 AM Dec 25, 2018 | Team Udayavani |

ಸುಬ್ರಹ್ಮಣ್ಯ : ಸರಕಾರಿ ಸ್ವಾಮ್ಯದ ಸಂಸ್ಥೆಯ ಕಚೇರಿ ಮತ್ತು ದೂರವಾಣಿ ಕೇಂದ್ರದಲ್ಲಿ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿಂದ ಸಂಸ್ಥೆ ವೇತನ ಪಾವತಿಸಿಲ್ಲ. ಈ ಕುರಿತು ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರನ್ನು ರವಿವಾರ ಭೇಟಿಯಾಗಿ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.

Advertisement

ಸುದೀರ್ಘ‌ ಅವಧಿಯಿಂದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇದುವರೆಗೆ ಮೂಲ ಸೌಕರ್ಯ ವಂಚಿತರಾಗಿ ಸೇವೆ ನೀಡಿರುವ ನಮಗೆ ಸಂಸ್ಥೆ ಕಾನೂನು ಬದ್ಧ ಸವಲತ್ತು ಮತ್ತು ಯಾವುದೇ ಉದ್ಯೋಗ ಭದ್ರತೆ ನೀಡಿಲ್ಲ. ನೌಕರರನ್ನು ಪದೇ ಪದೆ ಕೆಲಸದಿಂದ ವಜಾಗೊಳಿಸುತ್ತಿದ್ದಾರೆ. ಇದೀಗ ಕಳೆದ ಮೂರು ತಿಂಗಳಿಂದ ನಮಗೆ ಮಾಸಿಕ ವೇತನ ನೀಡಿಲ್ಲ. ಈ ಕುರಿತು ಸಂಬಂದಿಸಿದ ಗುತ್ತಿಗೆದಾರ ಮತ್ತು ದುಡಿಯುತ್ತಿರುವ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಇದೀಗ ಮೂರು ತಿಂಗಳ ವೇತನ ಸಿಗದೆ ನಮ್ಮ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಜತೆಗೆ ನಮ್ಮನ್ನೆ ನಂಬಿ ಜೀವನ ನಡೆಸುತ್ತಿರುವ ನಮ್ಮ ಅವಲಂಬಿತ ಕುಟುಂಬ ಸದಸ್ಯರು ಉಪವಾಸ ಬೀಳುವಂತಾಗಿದೆ. ಈ ಕುರಿತು ತಾವು ಸಂಬಂಧಿಸಿದ ಅಧಿಕಾರಿ ಗಳಿಗೆ ಮತ್ತು ಸರಕಾರ ಮಟ್ಟದಲ್ಲಿ ನಮಗೆ ನ್ಯಾಯ ಒದಗಿಸುವಂತೆ ಸಚಿವರ ಬಳಿ ಮನವಿ ಮಾಡಿದರು.

ಭರವಸೆ
ಮನವಿ ಮತ್ತು ಅಹವಾಲು ಸ್ವೀಕರಿಸಿದ ಕೇಂದ್ರ ಸಚಿವರು ನೌಕರರ ಸಮಸ್ಯೆ ಕುರಿತು ಅರಿವಿದೆ. ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿ, ಶೀಘ್ರದಲ್ಲಿ ಬಾಕಿ ವೇತನ ಪಾವತಿಗೆ ಕ್ರಮ ಜರಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನೌಕರರಿಗೆ ಭರವಸೆ ನೀಡಿದರು.

ದಕ್ಷಿಣ ಕನ್ನಡ ಟೆಲಿಕಾಂ ಸಲಹಾ ಸಮಿತಿ ಸದಸ್ಯ ವೆಂಕಟ್‌ ದಂಬೆಕೋಡಿ, ಗುತ್ತಿಗೆ ನೌಕರರಾದ ಉದಯಕುಮಾರ ಕೊಲ್ಯ, ಕಿಶೋರ್‌ ಮಡಪ್ಪಾಡಿ, ತೀರ್ಥ ರಾಮ ಬಳ್ಳಡ್ಕ, ಸುಬ್ಬಯ್ಯ ಎ.ಕೆ., ನಿತ್ಯಾನಂದ ಬಿ. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next