ಕಲಬುರಗಿ: ವರ್ಷದ 12 ತಿಂಗಳು ಪ್ರತಿ ಕುಟುಂಬದ ತಲಾ ಸದಸ್ಯರಿಗೆ 15 ಕೆಜಿ ಪಡಿತರ ಧಾನ್ಯ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬಿಪಿಎಲ್, ಎಪಿಎಲ್ ಎನ್ನುವ ತಾರತಮ್ಯವಿಲ್ಲದೆ ಕನಿಷ್ಠ ಒಂದು ವರ್ಷದ ಮಟ್ಟಿಗೆ ರೇಷನ್ ಕೊಡಬೇಕು. ಅಕ್ಕಿ, ತೊಗರಿ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಸೇರಿ 16 ಸಾಮಗ್ರಿ ನೀಡಬೇಕು. ಇವುಗಳಿಗಿಂತ ಬಹುಮುಖ್ಯವಾಗಿ ಸೋಫು, ಸ್ಯಾನಿಟೈಸರ್, ಮಾಸ್ಕ್, ಮಹಿಳೆಯರಿಗೆ ನ್ಯಾಪ್ಕಿನ್ ಪ್ಯಾಡ್ ಒದಗಿಸಬೇಕು ಎಂದು ಆಗ್ರಹಿಸಿದರು.
ಡಾ| ಎಂ.ಎಸ್. ಸ್ವಾಮಿನಾಥನ ವರದಿಯಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ, ಶೇಂಗಾ ಮತ್ತಿತರರ ಕೃಷಿ ಉತ್ಪನ್ನಗಳನ್ನು ಬೆಂಬಲಬೆಲೆಯಲ್ಲಿ ಖರೀದಿಸಬೇಕು. ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳಿಗೆ ಟೋಲ್ ಫ್ರೀ, ಉಚಿತ ಸಾಗಾಣಿಕೆ ವೆಚ್ಚ, ಮಾರುಕಟ್ಟೆ ಶುಲ್ಕ ವಿನಾಯಿತಿ ನೀಡಬೇಕು. ಅಲ್ಲದೇ, ಸಂಕಷ್ಟದಲ್ಲಿರುವ ಎಲ್ಲ ರೈತರಿಗೆ ಕನಿಷ್ಠ 10 ಸಾವಿರ ಆರ್ಥಿಕ ನೆರವು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಬೇಕು. ಕೃಷಿ ಸಾಲ, ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಬೇಕು. ರೇಷನ್, ಹಾಲು ಉತ್ಪಾದಕರು ಮತ್ತಿತರ ಸಹಕಾರ ಸಂಘಗಳ ಮೂಲಕ ರಸಗೊಬ್ಬರ, ಕೀಟನಾಶಕ ಸರಬರಾಜು ಮಾಡಬೇಕು. ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಬಿಡಬೇಕು. ಅರಣ್ಯ ಹಕ್ಕಿನ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು 75 ವರ್ಷಗಳ ದಾಖಲೆ ನೀಡುವ ವಿಚಾರ ಕೈಬಿಡಬೇಕು. ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಹೊರಡಿಸುವುದಕ್ಕೂ ತಡೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶಾಂತಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗ ಪಾಳಾ, ಮಲ್ಲನಗೌಡ, ಬನ್ನೆಪ್ಪ ಪೂಜಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.