Advertisement

ಹೈಕ ಸೌಲಭ್ಯ ಪ್ರಮಾಣಪತ್ರ ವಿತರಿಸಲು ಆಗ್ರಹ

04:02 PM Jul 10, 2018 | Team Udayavani |

ಹರಪನಹಳ್ಳಿ: ಹೈ.ಕ ಸೌಲಭ್ಯದ 371ಜೆ ಕಲಂ ಅನ್ವಯದ ದೃಢೀಕರಣ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಪಿಐ (ಎಂ.ಎಲ್‌) ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿ, ಜೆ.ಎಚ್‌. ಪಟೇಲರು ನೂತನ ಜಿಲ್ಲೆಗಳನ್ನು ರಚಿಸಿದ ಸಂದರ್ಭದಲ್ಲಿ ಬಳ್ಳಾರಿಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಳಿಸಿದರು.

ಪರಿಣಾಮ ತಾಲೂಕಿಗೆ 371ಜೆ ಕಲಂ ಸೌಲಭ್ಯ ಕೈ ತಪ್ಪಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಸರ್ಕಾರದಲ್ಲಿ ಪುನಃ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಇದುವರೆಗೂ ಇಲ್ಲಿಯ ಜನತೆಗೆ ಹೈ.ಕ ಭಾಗದ 371ಜೆ ಕಲಂ ಸೌಲಭ್ಯ ದೊರಕಿಸುವ ಪ್ರಮಾಣ ಪತ್ರವನ್ನು ವಿತರಿಸಿಲ್ಲ. ಕೂಡಲೇ 371ಜೆ ಕಲಂ ದೃಢೀಕರಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳ ಲಂಚಗುಳಿತನದಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. 
ಬಗರ್‌ ಹುಕುಂ ಸಾಗುವಳಿ ಪತ್ರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಕಾನೂನು ಬಾಹಿರವಾಗಿ ಶ್ರೀಮಂತರು ಮತ್ತು ದೊಡ್ಡ ಜಮೀನುದಾರರಿಗೆ ಪಟ್ಟಾ ವಿತರಿಸಲಾಗಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಕಡು ಬಡವರಿಗೆ ಪಟ್ಟಾ ವಿತರಿಸಬೇಕು ಎಂದು ಒತ್ತಾಯಿಸಿದರು.

ಪಿಟಿಸಿಎಲ್‌ಗೆ ಸಂಬಂಧಿಸಿದ ಜಮೀನುಗಳನ್ನು ನೋಂದಣಿ ಮಾಡುತ್ತಿರುವ ತಾಲೂಕಿನ ಸಬ್‌ ರಜಿಸ್ಟಾರ್‌ ಅವರನ್ನು ಅಮಾನತುಗೊಳಿಸಬೇಕು. ಅರಸೀಕೆರೆ, ತೆಲಿಗಿ, ಚಿಗಟೇರಿ ಹೋಬಳಿ ಕೇಂದ್ರಗಳಲ್ಲಿ ಪಹಣಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ಹಿರೇಕೆರೆ ಸೇರಿದಂತೆ ವಿವಿಧ ಕೆರೆಗಳ ಸಮಗ್ರ ಪುನಶ್ಚೇತನ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಿ ಸಣ್ಣ ನೀರಾವರಿ ಇಂಜಿನಿಯರ್‌ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

Advertisement

ತಾಲೂಕಿನಲ್ಲಿ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಕಾನೂನುಬಾಹಿರವಾಗಿ ಪಡೆದಿರುವ ಹೆಚ್ಚುವರಿ ಶುಲ್ಕ ಮತ್ತು ಡೊನೇಷನ್‌ ಪಡೆದಿರುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. 

ತಾಲೂಕಿನ ಎಲ್ಲಾ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಮುಖಂಡರಾದ ಸಂದೇರ ಪರುಶುರಾಮ, ಗುಳೇದಹಟ್ಟಿ ಸಂತೋಷ್‌, ಅಜ್ಜಪ್ಪ, ಕೊಟ್ರೇಶಪ್ಪ, ನಿಂಗಪ್ಪ, ಸುರೇಶ್‌, ಗುಡ್ಡಪ್ಪ, ಮಾಲತೇಶ್‌, ಇಬ್ರಾಹಿಂ, ನಾಗರಾಜ್‌ ಇತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next