ಮುಳಬಾಗಿಲು: ಪ್ರತಿ ಲೀಟರ್ ಹಾಲಿಗೆ 35 ರೂ. ಬೆಲೆ ನಿಗದಿ ಮಾಡಿ ಒಕ್ಕೂಟದಿಂದ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತ-ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪಶು ಆಹಾರದ ಏರಿಕೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಹಾಲು ಒಕ್ಕೂಟದಿಂದ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಿರುವುದು ಸ್ವಾಗತಾರ್ಹ. ಆದರೆ, ಒಕ್ಕೂಟ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಬೆಲೆ ಏರಿಕೆ ಮಾಡಿದ್ದಾರೆ ಹೊರತು, ರೈತರ ಮೇಲಿನ ಅನುಕಂಪದಿಂದ ಅಲ್ಲ, ಈ ಹಿಂದೆ ಒಕ್ಕೂಟದ ನೆಪದಲ್ಲಿ ಇಳಿಕೆ ಮಾಡಿದ್ದ ದರವನ್ನು ಈಗ ಏರಿಕೆ ಮಾಡಲಾಗಿದೆ ಅಷ್ಟೇ ಎಂದರು.
ರೈತರ ರಕ್ಷಣೆ ಮಾಡಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದುಬಾರಿಯಾಗುತ್ತಿರುವ ಇಂಧನ ತೈಲಗಳ ನೆಪದಲ್ಲಿ ಪಶು ಆಹಾರ ಖಾಸಗಿ ಮಾರಾಟಗಾರರು ಬೆಲೆ ಏರಿಕೆ ಮಾಡುತ್ತಿದ್ದಾರೆ. ಬೇಸಿಗೆ ಪ್ರಾರಂಭದಲ್ಲಿ ಸಮರ್ಪಕವಾದ ಮೇವು ಸಿಗದೆ ಖಾಸಗಿ ವ್ಯಕ್ತಿಗಳು ಬೆಳೆದಿರುವ ಮೇವನ್ನು ಖರೀದಿ ಮಾಡುವುದರಿಂದ ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ಕನಿಷ್ಠ 28 ರೂ. ಖರ್ಚು ಬರುತ್ತದೆ. ಒಕ್ಕೂಟ ನೀಡುವ ಬೆಲೆ ಸಾಕಾಗುತ್ತಿಲ್ಲ, ಗ್ರಾಹಕರಿಗೆ ಮಾರಾಟ ಮಾಡುವ ಹಾಲು ಉತ್ಪನ್ನ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಒಕ್ಕೂಟ ರೈತರಿಗೆ ಕನಿಷ್ಠ ಪಕ್ಷ 35 ರೂ. ನಿಗದಿ ಮಾಡುವ ಮೂಲಕ ರೈತರ ರಕ್ಷಣೆ ಮಾಡಬೇಕು ಎಂದರು.
ಅವ್ಯವಸ್ಥೆಗೆ ಕಡಿವಾಣ ಹಾಕಿ: ಬಿಸಿಲು ಮಳೆ ಎನ್ನದೇ ತನ್ನ ಸ್ವಾಭಿಮಾನದ ಜೀವನಕ್ಕಾಗಿ ಹೈನೋದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳಿಗೆ ಹಾಲು ಒಕ್ಕೂಟ ನೆರವಾಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿನ ಸಹಕಾರ ಸಂಘಗಳು ದಿನೇ ದಿನೆ ಭ್ರಷ್ಟಾಚಾರದ ಸಮಸ್ಯೆಗಳಾಗಿ ಮಾರ್ಪಡುತ್ತಿವೆ. ರೈತರು ಹಾಕುವ ಹಾಲಿಗೆ ಗುಣಮಟ್ಟದ ಬೆಲೆ ನೀಡದೆ ಎಲ್‌ಎಲ್ ಆರ್ ನೋ ಪೇಮೆಂಟ್ ಹೆಸರಿನಲ್ಲಿ ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಸಹಕಾರ ಸಂಘಗಳ ವಿರುದ್ಧ ಕ್ರಮ ಕೈಗೊಂಡು ಅವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಯುವ ರೈತ ಮುಖಂಡ ಪೊಂಬರಹಳ್ಳಿ ನವೀನ್, ಹಸಿರುಸೇನೆ ತಾಲೂಕು ಅಧ್ಯಕ್ಷ ವೇಣು, ಕೇಶವ, ಪುತ್ತೇರಿ ರಾಜು, ಮೇಲಾಗಾಣಿ ದೇವರಾಜ್, ಪದ್ಮಘಟ್ಟ ಸೋಮು, ಭಾಸ್ಕರ್, ಅಣ್ಣಿಹಳ್ಳಿ ನಾಗರಾಜ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್ ಹಾಗೂ ಮತ್ತಿತರರು ಇದ್ದರು.