Advertisement

ಸಂಪರ್ಕ ರಸ್ತೆಯ ಕಳೆ ಗಿಡ ಕೀಳಲು ಆಗ್ರಹ

12:47 PM Nov 10, 2017 | |

ಮೂಲ್ಕಿ: ಕಿನ್ನಿಗೋಳಿ-ಮೂಲ್ಕಿ ಮುಖ್ಯ ರಸ್ತೆಯನ್ನು ತಲುಪಲು ಕಿಲ್ಪಾಡಿ ಮತ್ತು ಶಿಮಂತೂರು ಗ್ರಾಮಸ್ಥರು ಬಳಸುವ ರೈಲು ಹಳಿ ಮೂಲಕ ಹಾದು ಹೋಗುವ ರಸ್ತೆಯ ಎರಡೂ ಪಕ್ಕದಲ್ಲಿ ಬೃಹದಾಕಾರದ ಪೊದೆಗಳು ಬೆಳೆದು, ಹಗಲು ಹೊತ್ತಿನಲ್ಲಿ ನಡೆದುಕೊಂಡು ಹೋಗಲೂ ಭಯಪಡುವಂತಾಗಿದೆ.

Advertisement

ರೈಲು ಹಳಿಯನ್ನು ಹಾದು ಪಂಚಾಯತ್‌ ಕಟ್ಟಡದ ಪಕ್ಕದಿಂದ ಸಾಗುವ ಈ ರಸ್ತೆಯನ್ನು ಸಾಕಷ್ಟು ಜನ ಸಂಪರ್ಕಕ್ಕೆ ಬಳಸುತ್ತಾರೆ. ನಡೆದುಕೊಂಡು ಕೆಲಸಕ್ಕೆ ಹೋಗುವವರು, ಶಾಲೆ – ಕಾಲೇಜಿನ ಮಕ್ಕಳು ಈ ರಸ್ತೆಯ ಮೂಲಕವೇ ಸಾಗುತ್ತಾರೆ. ಈಗ ಕಳೆಗಿಡಗಳಿಂದ ಬಹುತೇಕ ಮುಚ್ಚಿಕೊಂಡಿದೆ. ಸಂಜೆ ಹೊತ್ತಿಗಂತೂ ನಿರ್ಜನವಾಗುವ ಈ ರಸ್ತೆಯಲ್ಲಿ ಸಾಗುವುದೆಂದರೆ ಭಯ ಮೂಡುತ್ತದೆ. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪಂಚಾಯತ್‌ ನಿರ್ಲಕ್ಷ್ಯ
ಕಳೆ ಕೀಳುವ ಯಂತ್ರವನ್ನು ಉಪಯೋಗಿಸಿ ಕೆಲಸ ಮಾಡಿದರೂ ತಿಂಗಳು ಗಟ್ಟಲೆ ಕೆಲಸ ಮಾಡುವಂತಹ ಸಾಕಷ್ಟು ಜಾಗಗಳು ಪಂಚಾಯತ್‌ ವ್ಯಾಪ್ತಿಯಲ್ಲಿವೆ. ಬಿಲ್‌ ಪಾವತಿಗೆ ಹಣದ ವ್ಯವಸ್ಥೆ ಪಂಚಾಯತ್‌ನಲ್ಲಿ ಸುಲಭ ಸಾಧ್ಯ ವಿಲ್ಲದ್ದರಿಂದ ಸದ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಪಂಚಾಯತ್‌ ಹಾಗೂ ಇತರ ಅನುದಾನಗಳನ್ನು ಬಳಸಿ, ಸ್ವಚ್ಛ ಭಾರತ್‌ ಯೋಜನೆ ಮೂಲಕ ಕೆಲಸ ಮಾಡಬಹುದು ಎನ್ನುತ್ತಾರೆ ನಾಗರಿಕರು.

ಮಳೆ ನಿಂತ ತತ್‌ಕ್ಷಣ ಕೆಲಸ
ಸಂಘ-ಸಂಸ್ಥೆಗಳು ಕೈಜೋಡಿಸಿದರೆ ಸಹಕಾರ ನೀಡಲು ಪಂಚಾಯತ್‌ ಸಿದ್ಧವಿದೆ. ಮಳೆ ನಿರಂತರವಾಗಿ ಬರುತ್ತಿದೆ. ಒಂದು ಸಲ ಕಳೆಗಿಡ ಕಿತ್ತರೆ ಮತ್ತೆ ಬೆಳೆಯುತ್ತದೆ. ಹೀಗಾಗಿ, ಮಳೆ ನಿಲ್ಲುವುದನ್ನೇ ಕಾಯುತ್ತಿದ್ದೇವೆ .
ಶ್ರೀಕಾಂತ್‌ ರಾವ್‌
  ಗ್ರಾ.ಪಂ. ಅಧ್ಯಕ್ಷ, ಕಿಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next