ಸೇಡಂ: ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಹಿಂದೂಗಳ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.
ಇಲ್ಲಿನ ಪೊಲೀಸ್ ಠಾಣೆ ಎದುರು ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೆ, ನಾವೂ ವಿವಾದಾತ್ಮಕ ಹೇಳಿಕೆ ನೀಡಲು ಸಿದ್ಧ ಎಂದು ಹಿಂದೂ ಮುಖಂಡರು ಎಚ್ಚರಿಕೆ ನೀಡಿದರು.
ಇದಕ್ಕೆ ಪೊಲೀಸರು ಪ್ರತಿಕ್ರಿಯಿಸಿದ್ದು, ಯಾರಾದರೂ ದೂರು ನೀಡಿದ್ದಲ್ಲಿ ಮಾತ್ರ ಕೇಸ್ ದಾಖಲಿಸುವುದಾಗಿ ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಸುಮಾರು ಒಂದು ಗಂಟೆ ಕಾಲ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಭಜರಂಗದಳದ ಪ್ರೇಮ ಚವ್ಹಾಣ, ಬಿಜೆಪಿ ಮುಖಂಡರಾದ ರಾಜಶೇಖರ ನಿಲಂಗಿ, ನಗರಾಧ್ಯಕ್ಷ ಅನಿಲ ಐನಾಪುರ, ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ ಗಡಿಕೇಶ್ವಾರ, ಪ್ರದೀಪ ಪಾಟೀಲ ಹೊಸಳ್ಳಿ, ರವಿ ಶೆಟ್ಟಿಹೂಡಾ, ಶ್ರೀಧರ ಐನಾಪುರ, ಕಾಶೀನಾಥ ನಿಡಗುಂದಾ, ಮೌನೇಶ ಅಡಕಿ, ರಾಘವೇಂದ್ರ ಮುಸ್ತಾಜರ, ಬಸವರಾಜ ರೇವಗೊಂಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.