ಶಿಡ್ಲಘಟ್ಟ: ನಗರದ 22 ನೇ ವಾರ್ಡಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ವೃತ್ತಕ್ಕೆ ನಟ ಪುನೀತ್ ರಾಜ್‌ಕುಮಾರ್ ಹೆಸರಿಡಬೇಕೆಂದು ಆಗ್ರಹಿಸಿ ನಗರದ ಸ್ನೇಹ ಯುವಕರ ಸಂಘದ ಪದಾಧಿಕಾರಿಗಳು ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ನಗರಸಭೆಯ ಸದಸ್ಯ ಮಂಜುನಾಥ್ ಮಾತನಾಡಿ ಕನ್ನಡಾಭಿಮಾನಿಗಳು 22 ನೇ ವಾರ್ಡಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುತ್ತೇವೆ ಕನ್ನಡ ನಾಡು, 30 ವರ್ಷಗಳಿಂದ ಕನ್ನಡ ನುಡಿ, ‘ಸಾಹಿತ್ಯದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆನೇಕ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ ಎಂದರು.
ನಟ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ತನ್ನ ನಟನೆಯಿಂದ ಎಲ್ಲಾ ಕನ್ನಡಿಗರ ಮನೆ ಮಗನಂತಿದ್ದರು ಹಾಗೂ ತನ್ನ ಸಮಾಜಸೇವೆಯ ಮುಖಾಂತರ ಅನೇಕ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿದಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಆಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗ ಕೊಡುಗೈ ದಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಹೀಗಾಗಿ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ನಟ ಪುನೀತ್ ರಾಜ್ ಕುಮಾರ್ ಅವರ ಆಪಾರ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುತ್ತಾ ಅವರ ಹೆಸರನ್ನು ನಾವು ರಾಜ್ಯೋತ್ಸವ ಆಚರಿಸುವ ವೃತ್ತಕೈ ಹೆಸರಿಡಲು ಅನುಮತಿ ನೀಡಿ ಆದೇಶ ನೀಡಬೇಕೆಂದು ನಹರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ ಹೆಸರಾಂತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡಲು ನಗರಸಭೆಯ ವಿಷಯ ಮಂಡಿಸಿ ಅನುಮೋದನೆ ಪಡೆದುಕೊಂಡು ನಾಮಕರಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಅಭಿಮಾನಿ ಇಂಡಿಯನ್ ಗ್ಯಾಸ್ ಭರತ್, ಅನಂತಕೃಷ್ಣ,ಗಿರೀಶ್, ಶ್ರೀನಿವಾಸ್,ಅಪ್ಪಯ್ಯ, ಮಧು,ಜಾನಿ ಮತ್ತಿತರರು ಉಪಸ್ಥಿತರಿದ್ದರು.