ನಗರ : ಉಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರಕಾರದಿಂದ ಪ್ಲಾಸ್ಟಿಕ್ ಮೇಲಿನ ನಿರ್ಬಂಧ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಪುತ್ತೂರು ಸಹಾಯಕ ಕಮಿಷನರ್ ಕಚೇರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.
ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ. ಆದರೆ ಆ. 15 ಮತ್ತು ಜ. 26ರಂದು ರಾಷ್ಟ್ರಧ್ವಜಕ್ಕೆ ಹಲವು ಕಡೆಗಳಲ್ಲಿ ಅಗೌರವ ತೋರಲಾಗುತ್ತದೆ. ಕಾಗದದಿಂದ/ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಪ್ಲಾಸ್ಟಿಕ್‌ನಿಂದ ತಯಾರಾದ ರಾಷ್ಟ್ರಧ್ವಜವಂತೂ ನಾಶವೂ ಆಗುವುದಿಲ್ಲ. ಇದರಿಂದ ಹಲವು ದಿನಗಳವರೆಗೆ ನಮಗೆ ಆ ರಾಷ್ಟ್ರಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ.
ರಾಷ್ಟ್ರಧ್ವಜದ ಈ ರೀತಿಯಲ್ಲಾಗುವ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಉತ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು ಹೂಡಲಾಗಿದೆ. ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜದ ಅಗೌರವವನ್ನು ತಡಗಟ್ಟಲು ಸರಕಾರಕ್ಕೆ ಆದೇಶವನ್ನು ಕೊಡಲಾಗಿತ್ತು. ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನದಲ್ಲಿ ಸರಕಾರವು ‘ಪ್ಲಾಸ್ಟಿಕ್ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಹಿಂದೂ ಜನಜಗೃತಿ ಸಮಿತಿಯ ಚಂದ್ರ ಮೊಗೇರ, ಸಾಂತಪ್ಪ ಗೌಡ, ಧರ್ಣಪ್ಪ ಗೌಡ, ಜನಾರ್ದನ ಗೌಡ, ರಮೇಶ, ಯೋಗೀಶ್, ಕೃಷ್ಣ ಕುಮಾರ್ ಶರ್ಮ, ಕೇಶವ ಗೌಡ, ಲೋಕೇಶ್, ಚಂದ್ರಶೇಖರ್, ಹರಿಪ್ರಸಾದ್ ಶೆಟ್ಟಿ, ಮಾಧವ ಎಸ್. ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.
ಕಾನೂನು ಕ್ರಮ
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಹಾಯಕ ಕಮಿಷನರ್ ಕಚೇರಿ ಮ್ಯಾನೇಜರ್, ರಾಷ್ಟ್ರ ಧ್ವಜದ ಅವಮಾನ ಆಗುತ್ತಿದ್ದಲ್ಲಿ ಸಾರ್ವಜನಿಕರು ನಮ್ಮನ್ನು ಸಂಪರ್ಕಿಸಬಹುದು. ನಾವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.