ಶಹಾಬಾದ: ನಗರದ ವಾರ್ಡ್ ನಂ.12ರ ಬಂಜಾರಾ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳು ಕಳಪೆ ಹಾಗೂ ಅರ್ಧಂಬರ್ಧ ಆಗಿ ಮೂರು ವರ್ಷಗಳಾಗಿವೆ. ಕಾಮಗಾರಿಯನ್ನು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಗುತ್ತಿಗೆದಾರನ ಪರವಾನಗಿ ರದ್ದು ಪಡಿಸಿ, ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ ನೇತೃತ್ವದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈಗಾಗಲೇ ಮೂರು ವರ್ಷದಿಂದ ಸರಿಯಾಗಿ ಒಂದು ಮನೆಯನ್ನು ನಿರ್ಮಿಸಿಲ್ಲ. ಅಲ್ಲದೇ ಸಂಪೂರ್ಣ ಕಳಪೆ ಮಟ್ಟದಲ್ಲಿ ಕಾಮಗಾರಿ ಮಾಡಿದ್ದಾನೆ. ಸುಮಾರು 250 ಮನೆ ನಿರ್ಮಾಣ ಮಾಡುವ ಗುರಿಯಿದ್ದರೂ ಮೂರು ವರ್ಷದ ಒಳಗೆ 30ಮನೆಗಳನ್ನು ಕಟ್ಟಿಲ್ಲ. ಫಲಾನುಭವಿಗಳ ಹತ್ತಿರ ಸೂಕ್ತ ದಾಖಲೆ ಪಡೆಯುತ್ತಿಲ್ಲ. ರಸ್ತೆ ಚರಂಡಿಗೆ ಜಾಗ ನೀಡದೇ ಮನಸ್ಸಿಗೆ ಬಂದಂತೆ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾನೆ ಎಂದು ಆಪಾದಿಸಿದ್ದಾರೆ.
ಜಾಗದ ಅಳತೆ ಮಾಡದೇ ಮನೆ ನಿರ್ಮಾಣಕ್ಕೆ ಮುಂದಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೂರು ವರ್ಷವಾದರೂ ಈ ಕಡೆ ತಲೆ ಹಾಕಿಲ್ಲ ಎಂಬುದೇ ದುರ್ದೈವ. ಈ ಬಡಾವಣೆಯಲ್ಲಿ ಎಲ್ಲ ವರ್ಗದ ಜನರು ಇದ್ದಾರೆ. ಅದರಲ್ಲಿ ಬಹುತೇಕರು ಬಡ ಕೂಲಿಕಾರ್ಮಿಕರಿದ್ದಾರೆ. ಆದರೆ ಗುತ್ತಿಗೆದಾರರು ಒಂದೇ ಸಮಾಜದ ಜನರಿಗೆ ಸೌಲಭ್ಯ ನೀಡುತ್ತಿದ್ದಾರೆ. ಒಂದು ಕುಟುಂಬದ ಸದಸ್ಯರಿಗೆ ಒಂದೇ ಮನೆ ನಿರ್ಮಾಣ ಮಾಡಬೇಕು. ಆದರೆ ಹಣ ಪಡೆದು ಆ ಕುಟುಂಬದ ಮತ್ತೊಬ್ಬ ಸದಸ್ಯರ ಹೆಸರಿನಲ್ಲಿಯೂ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಮಂಡಳಿ ನೀಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಬೇರೆಯವರ ಹೆಸರು ಸೇರಿಸುವ ಕಾರ್ಯ ನಡೆಯುತ್ತಿರುವುದನ್ನು ನೋಡಿದರೇ ಇದರಲ್ಲಿ ಮಂಡಳಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಶಂಕೆ ಮೂಡಿದೆ. ಸದ್ಯ ಬಂಜಾರಾ ನಗರದಲ್ಲಿ ಮನೆ ನಿರ್ಮಾಣ ಮಾಡಲು ಸರಕಾರ ಆದೇಶ ಮಾಡಿದೆ. ಆದರೆ ಗುತ್ತಿಗೆದಾರರು ಬಂಜಾರಾ ನಗರ ಬಿಟ್ಟು ಬೇರೆ ವಾರ್ಡ್‌ನಲ್ಲಿ ಹಣ ಪಡೆದು ಮನೆ ಕಟ್ಟುವ ಕಾಮಗಾರಿ ಮಾಡುತ್ತಿದ್ದಾರೆ. ಕೂಡಲೇ ಕಾನೂನು ಬಾಹಿರ ಕ್ರಮ ತಡೆಯಬೇಕು. ಕೂಡಲೇ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಹೊಸದಾದ ಗುತ್ತಿಗೆದಾರನಿಗೆ ಕೆಲಸ ನೀಡಿ, ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೇ ಬಡಾವಣೆಯ ಜನರೊಂದಿಗೆ ಮಂಡಳಿಯ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದೆಂದು ಕಿರಣ ಚವ್ಹಾಣ ಹೇಳಿದರು.
ನಂತರ ಮಾತನಾಡಿದ ಎಇಇ ಶ್ರೀಧರ ಕುಲಕರ್ಣಿ ಕೇವಲ ಹದಿನೈದು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಸಕಲ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ನರಸಿಂಗ್ ರಾಠೊಡ, ಆನಂದ ಚವ್ಹಾಣ, ಮೋಹನ ನಾಯಕ, ಹಣಮಂತ ಪವಾರ, ಕೃಷ್ಣ ನಾಯಕ, ಅಜಯ ರಾಠೊಡ, ವಿಕಾಸ ಚವ್ಹಾಣ, ಶಿವಾ ರಾಠೊಡ, ಅನುರಾಗ ರಾಠೊಡ, ಸಚಿನ್ ರಾಠೊಡ ಹಾಗೂ ಮಹಿಳೆಯರು ಇದ್ದರು