Advertisement

ಶಿಕ್ಷೆ ಪುನರ್‌ ಪರಿಶೀಲಿಸಲು ಮುಖ್ಯಮಂತ್ರಿಗೆ ಮನವಿ

01:08 AM Jun 25, 2017 | Team Udayavani |

ಬೆಂಗಳೂರು: ಇಬ್ಬರು ಪತ್ರಕರ್ತರಿಗೆ ಶಿಕ್ಷೆ ವಿಧಿಸಿರುವ ವಿಧಾನಸಭೆ ಸ್ಪೀಕರ್‌ ಅವರ ತೀರ್ಮಾನವನ್ನು ಪುನರ್‌ಪರಿಶೀಲಿಸುವಂತೆ ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ಬೆಂಗಳೂರು ವರದಿಗಾರರ ಕೂಟ ಮುಖ್ಯಮಂತ್ರಿಯವರನ್ನು ಮನವಿ ಮಾಡಿದೆ.

Advertisement

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ಬೆಂಗಳೂರು ವರದಿಗಾರರ ಕೂಟದ ಪದಾಧಿಕಾರಿಗಳು, ನಾವು ಸ್ಪೀಕರ್‌ ಅವರ ತೀರ್ಮಾನ ಪ್ರಶ್ನಿಸುತ್ತಿಲ್ಲ. ಆದರೆ, ಈ ತೀರ್ಪನ್ನು ಪುನರ್‌ಪರಿಶೀಲಿಸಿ ಪತ್ರಕರ್ತರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ತಾವು ತಮ್ಮ ರಾಜಕೀಯ ಮುತ್ಸದ್ದಿತನ ಪ್ರದರ್ಶಿಸಿ, ಪತ್ರಿಕಾರಂಗದ ಈ ಅಭದ್ರತೆ ಗೊಂದಲ  ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಪ್ರಸ್‌ಕ್ಲಬ್‌, ಬೆಂಗಳೂರು ವರದಿಗಾರರ ಕೂಟ ಸೇರಿದಂತೆ ಕರ್ನಾಟಕದ ಎಲ್ಲ ಪತ್ರಕರ್ತರ ಸಂಘಟನೆಗಳ ಸದಸ್ಯರು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯುನ್ನತ ಅಂಗವಾಗಿರುವ ಸಂಸದೀಯ ವ್ಯವಸ್ಥೆಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅದರಲ್ಲೂ ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ವರ್ಚಸ್ಸು, ಗೌರವ ಮತ್ತು ಇತಿಹಾಸವಿದೆ. ಆದರೆ, ಇತ್ತಿಚಿನ ಕೆಲವು ಬೆಳವಣಿಗೆಗಳು ಪತ್ರಿಕಾರಂಗಕ್ಕೆ ದೊಡ್ಡ ಆತಂಕವನ್ನು ಉಂಟುಮಾಡಿದೆ. ಮುಖ್ಯವಾಗಿ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸದನದ ಹಕ್ಕುಬಾಧ್ಯತಾ ಸಮಿತಿಯ ವರದಿ ಪ್ರಕಾರ ಸ್ಪೀಕರ್‌ ಅವರು ಇಬ್ಬರು ಪತ್ರಕರ್ತರಿಗೆ ಶಿಕ್ಷೆ ಪ್ರಕಟಿಸಿರುವುದು ಇಡೀ ಪತ್ರಿಕಾ ಬಳಗವನ್ನು ಆತಂಕಕ್ಕೀಡು ಮಾಡಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್‌ ಅವರು ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ, ಇಂತಹ ಬೆಳವಣಿಗೆಗಳು ಅನೇಕ ದಶಕಗಳಿಂದ ಶಾಸಕಾಂಗ ಮತ್ತು ಪತ್ರಿಕಾರಂಗದ ನಡುವೆ ಇರುವ ಉತ್ತಮ ಬಾಂಧವ್ಯ, ಸೌಹಾರ್ದತೆ ಧಕ್ಕೆ ತಂದಾಗುತ್ತಿದೆ ಅನ್ನುವುದು ನಮ್ಮ ಅನಿಸಿಕೆ. ಆದ್ದರಿಂದ ತೀರ್ಪು ಪುನರ್‌ಪರಿಶೀಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಕಿರಣ್‌, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ್‌, ಉಪಾಧ್ಯಕ್ಷ ಆರ್‌.ಟಿ.ವಿಠಲ್‌ವುೂರ್ತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next