ಧಾರವಾಡ: ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಬಸವ ಕೇಂದ್ರ, ಅಕ್ಕನ ಬಳಗ, ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್, ವಿಶ್ವ ಲಿಂಗಾಯತ ಸಮಿತಿ ಕೇಂದ್ರ ಘಟಕ, ಅಖೀಲ ಕರ್ನಾಟಕ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿ ಹಾಗೂ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿಯ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಿದ್ದರಾಮಯ್ಯ ಅವರಿಗೆ ಈ ಕುರಿತಂತೆ ಲಿಖೀತ ರೂಪದಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಮನವಿ ಸಲ್ಲಿಸಲಾಯಿತು. 1831ರಿಂದ 1941 ವರೆಗಿನ ಎಲ್ಲ ರಾಷ್ಟ್ರೀಯ ಜನಗಣತಿಯಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ದಾಖಲಾಗಿದೆ.
ಸುಪ್ರೀಂಕೋರ್ಟ್ ಆದೇಶ, ಗೆಜೆಟ್‌ಗಳು, ಶಾಸನ ಹಾಗೂ ಸಮಕಾಲೀನ ವಚನಕಾರರ ಸಾಹಿತ್ಯದಿಂದ ಪಾಶ್ಚಿಮಾತ್ಯ ಹಾಗೂ ದೇಶದ ಶ್ರೇಷ್ಠ ಸಂಶೋಧಕರ ಅಭಿಮತಗಳಿಂದ ಲಿಂಗಾಯತವು ಸ್ವತಂತ್ರ ಧರ್ಮವೆಂದು ಸಿದ್ಧವಾಗಿದೆ. ಲಿಂಗಾಯತ ಧರ್ಮಕ್ಕೆ ಶಾಸನಬದ್ಧ, ಕಾನೂನಾತ್ಮಕ ಸಾಕ್ಷಿಗಳು, ಆಕರಗಳು, ದಾಖಲೆಗಳಿದ್ದು ಅದು ಒಂದು ಪರಿಪೂರ್ಣ ಧರ್ಮವಾಗಿದೆ.
ಸಮಾನತೆ ಸಾರಿದ ಹಾಗೂ ವೈದಿಕ ಸಂಪ್ರದಾಯ, ಮೂಢನಂಬಿಕೆ, ಕಂದಾಚಾರವನ್ನು ಕಿತ್ತೆಸೆದ ಬಸವಣ್ಣ ಹಾಗೂ ಶಿವಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ, ಪ್ರಗತಿಪರ, ವೈಚಾರಿಕ ಆಂದೋಲನದ ಧರ್ಮವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಿರಿಯ ಸಾಹಿತಿಗಳಾದ ಡಾ| ಎನ್.ಜಿ. ಮಹಾದೇವಪ್ಪ, ಡಾ| ವೀರಣ್ಣಾ ರಾಜೂರ, ರಂಜಾನ್ ದರ್ಗಾ, ಡಾ| ಶಂಭುಲಿಂಗ ಹೆಗಡಾಳ, ಬಸವಾಭಿಮಾನಿಗಳಾದ ಪ್ರಭು ನಡಕಟ್ಟಿ, ಶಿವಣ್ಣ ಶರಣ್ಣನವರ, ರಾಜು ಮರಳಪ್ಪನವರ, ಸಿದ್ರಾಮಣ್ಣ ನಡಕಟ್ಟಿ, ಬಸವಂತಪ್ಪ ತೋಟದ, ನಾಗರಾಜ ಪಟ್ಟಣಶೆಟ್ಟಿ, ಶಿವಶರಣ ಕಲಬಶೆಟ್ಟರ, ಚನಬಸಪ್ಪ ಕಗ್ಗಣ್ಣವರ, ಶಿವಾನಂದ ಶೆಟ್ಟೆಣ್ಣವರ, ಪ್ರೊ| ಎಸ್.ಕೆ. ಕುಂದರಗಿ, ಶಿವಲೀಲಾ ಕುಲಕರ್ಣಿ, ಸವಿತಾ ನಡಕಟ್ಟಿ, ಅನಸೂಯಾ ಬಿರಾದಾರ, ಸುನಿತಾ ಮೂರಶಿಳ್ಳಿ, ಸುಮಂಗಲಾ ಅಂಗಡಿ ಇದ್ದರು.