ನನಗದು ಎರಡನೇ ವರ್ಷದ ಎಂಎ ತರಗತಿಯ ಮೊದಲ ದಿನ. ಜಿಟಿ ಜಿಟಿ ಸುರಿಯುವ ಮಳೆ. ಕ್ಯಾಂಪಸ್ ತುಂಬೆಲ್ಲಾ ಹಚ್ಚ ಹಸಿರಿನ ಸ್ವಚ್ಛಂದ ಗಾಳಿಯ ನಿನಾದ. ಮನಸ್ಸು ಅಂದೇಕೋ ತುಂಬಾ ಖುಷಿಯಲ್ಲಿತ್ತು. ತರಗತಿ ಪ್ರಾರಂಭವಾಗಿ ಎರಡು ದಿನಗಳು ಮಾತ್ರ ಕಳೆದಿದ್ದರಿಂದ ನನ್ನ ತರ್ಲೆ ಗೆಳೆಯರು ಬಂದಿರಲಿಲ್ಲ. ಮಧ್ಯಾಹ್ನ ತರಗತಿ ಮುಗಿಸಿ ಸೀದಾ ಕ್ಯಾಂಟೀನ್ ಕಡೆ ನಡೆದೆ. ಎರಡು ಮೂರು ಗುಟ್ಕು ಚಹಾ ಹೀರಿದ್ದೆ ಅನ್ಸುತ್ತೆ. ಯಾರೋ ಕ್ಯಾಂಟೀನ್ ಕ್ಯಾಶಿಯರ್ ಜಗ್ಗಣ್ಣನ ಜೊತೆ ಜೊರಾಗಿ ನಗ್ತಾ ಮಾತನಾಡೋದು ಕೇಳಿಸಿತು. ಯಾರೆಂದು ಒಮ್ಮೆ ತಿರುಗಿ ನೋಡಿದೆ. ಒಂದು ಕ್ಷಣ ಕಣ್ ಮುಚ್ಚಬೇಕೆನಿಸಲಿಲ್ಲ. ಯಾಕಂದ್ರೆ, ಕ್ಯಾಂಪಸ್‌ನಲ್ಲಿ ಉದ್ದ ಜಡೆಯ ಆ ಸುಂದರಿಯನ್ನ ನೋಡಿದ್ದೆ.
ಅಬ್ಬಬ್ಟಾ ಅವಳದೇನು ಆ ನಗು, ಬಳ್ಳಿಯ ಸುರುಳಿಯಂತೆ ಜೋಲಾಡುತ್ತಿದ್ದ ಮುಂಗುರುಳಿಗೆ ಗಳಿಗೆಗೊಮ್ಮೆ ಬೆರಳಾಡಿಸುತ್ತಿದ್ದನ್ನು ಕಂಡರೆ ಹೃದಯಕ್ಕೆ ಕಚಗುಳಿ ಇಟ್ಟಂತಾಗುತ್ತಿತ್ತು.. ಸಂಪಿಗೆ ಮೂಗಿಗೆ ರಿಂಗ್ ಹಾಕಿದ್ದಳು. ಪಟ ಪಟ ಮಾತಾಡುವ ಅವಳ ಆ ತುಟಿಗಳು ಒಂದುವೇಳೆ ಮರದಿಂದ ಮಾಡಿದ್ದವಾಗಿದ್ದರೆ ನಿಜವಾಗಿಯೂ ಒಡೆದೊಗುತ್ತಿದ್ದವು. ಮಿನುಗುವ ಅವಳ ಕಣ್ಣನ್ನೇ ನೋಡುವ ಆಸೆಯಾಯ್ತು. ಆದರೆ ಪರಿಚಯವಿಲ್ಲದ ಬೆಡಗಿಯನ್ನು ಹೇಗೆ ಮಾತನಾಡಿಸಲಿ? ಇರಲಿ, ಊರಿಗೆ ಬಂದವಳು ನೀರಿಗೆ ಬರಲ್ವಾ? ಒಂದಲ್ಲಾ ಒಂದು ದಿನ ನನಗೆ ಪರಿಚಯವಾಗ್ತಾಳೆ ಅಂದುಕೊಂಡು ಹಾಸ್ಟೆಲ… ಕಡೆ ಹೆಜ್ಜೆ ಹಾಕಿದೆ…
ನಾಲ್ಕು ದಿನ ಕಳೆದವು. ಖಾಲಿಯಾಗಿದ್ದ ಕ್ಯಾಂಪಸ್ ಬಣ್ಣ ಬಣ್ಣದ ಪತಂಗಗಳಿಂದ ಕಂಗೊಳಿಸುತ್ತಿತ್ತು. ಆದರೆ ಜಿಟಿಜಿಟಿ ಮಳೆ ಮಾತ್ರ ನಿಂತಿರಲಿಲ್ಲ. ಎಲ್ಲಿ ನೋಡಿದರೂ ಛತ್ರಿಗಳದ್ದೇ ಹಾವಳಿ. ಮಧ್ಯಾಹ್ನ ತರಗತಿ ಮುಗಿಸಿಕೊಂಡು ಹಾಸ್ಟೆಲ್‌ಗೆ ಹೋಗುವಾಗ ಐದಾರು ಹುಡುಗಿಯರು ಛತ್ರಿ ಹಿಡಿದುಕೊಂಡು ನಡೆಯುತ್ತಿದ್ದರು. ನಾವು ಸೆಕೆಂಡ್ ಇಯರ್ ಆಗಿದ್ದರಿಂದ ಸೀನಿಯಾರಿಟಿ ಮೆರೆಯಬೇಕೆಂಬ ಧಿಮಾಕಿನಿಂದ ಆ ಹುಡುಗಿಯರನ್ನು ನೋಡುತ್ತ “ಏನೋ ಮಗ ನಮ್ ಕ್ಯಾಂಪಸ್ ತುಂಬ ಬರೀ ಛತ್ರಿಗಳೇ ಇವೆ’ ಎಂದೆ. ಆ ಮಾತು ಕೇಳಿದ್ದೇ ತಡ; ಸೀದಾ ನಡೆಯುತ್ತಿದ್ದ ಅಮ್ಮಣ್ಣಿಯರು ಸರಕ್ಕನೆ ತಿರುಗಿದರು. ಏನ್ ಆಶ್ಚರ್ಯ! ಕ್ಯಾಂಟೀನ್‌ನಲ್ಲಿ ಕಂಡ ಬೆಡಗಿ ಆ ಹುಡುಗಿಯರ ಗುಂಪಲ್ಲಿದ್ದಳು. ನನ್ನ ನೋಡಿ ಹೂಂ, ಯಾಕೆ? ನಿಮಗೊಂದು ಛತ್ರಿ ಬೇಕಾ?… ಎಂದು ಕೇಳಿ ನಸುನಗುತ್ತ ಹೆಜ್ಜೆ ಮುಂದಿಟ್ಟಳು.
ಅವಳು ಕ್ಯಾಂಪಸ್‌ನ ಲೈಬ್ರರಿ, ಕ್ಯಾಂಟೀನ್, ಮಂಡಕ್ಕಿ ಅಂಗಡಿ, ಪಂಪವನ, ಕುವೆಂಪು ಸ್ಟಾಚ್ಯು… ಇಲ್ಲೆಲ್ಲ ಎದುರಾಗುತ್ತಾಳೆ. ನನ್ನನ್ನು ನೋಡಿ ಗೆಳತಿಯರ ಜೊತೆ ಅದೇನನ್ನೋ ಹೇಳುತ್ತಾ ನಗುತ್ತಾಳೆ.ಆದರೆ ನನ್ನ ಜೊತೆ ಒಂದು ಮಾತೂ ಆಡದೆ ಮುಂದೆ ಸಾಗ್ತಾಳೆ. ಅಯ್ಯೋ ಮಾರಾಯ್ತಿ, ನಿನಗೇನಾಯಿತು.. ಏಕೆ ನನ್ನ ನೋಡಿ ನಗ್ತಿ? ಎಂದು ಕೇಳಬೇಕೆನಿಸುತ್ತದೆ. ಆದರೆ ನಿಮಗ್ಯಾಕ್ರಿ ಅವೆಲ್ಲ ಎಂಬ ಉತ್ತರ ಬಂದ್ರೆ ಕಷ್ಟ ಆಗುತ್ತೆ ಅಲ್ವಾ? ಆದ್ದರಿಂದ ಇಲ್ಲಿಯವರಿಗೂ ಕೇಳಿಲ್ಲ. ಏನು ಮಾಡಲಿ, ಕೊಂಚ ಧೈರ್ಯ ಕಡಿಮೆ ನನಗೆ..
ಗಿರೀಶ ಗಂಗನಹಳ್ಳಿ