Advertisement

ಡಾ.ಸಾಂಬ್ರಾಣಿ ಅವರಿಗೆ ಶ್ರದ್ಧಾಂಜಲಿ

11:01 AM Mar 24, 2018 | Team Udayavani |

ಬೆಂಗಳೂರು: ಉತ್ತರ ಕರ್ನಾಟಕದ ಜನರಿಗಾಗಿ ನಗರದಲ್ಲಿ ಭವನ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ತಿಳಿಸಿದರು.

Advertisement

ರಾಜಾಜಿನಗರದ ದಾಸಾಶ್ರಮ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ಸಾಂಬ್ರಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭವನ ನಿರ್ಮಾಣ ಡಾ.ಚಂದ್ರಶೇಖರ ಸಾಂಬ್ರಾಣಿ ಅವರ ಕನಸಾಗಿತ್ತು. ಅದನ್ನು ನನಸು ಮಾಡಿದಾಗ ಮಾತ್ರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಇದಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಜನತೆಗೆ ಉತ್ತರ ಕರ್ನಾಟಕದ ಸಂಸ್ಕೃತಿ ಪ್ರಚುರಪಡಿಸುವಲ್ಲಿ ಡಾ.ಸಾಂಬ್ರಾಣಿ ಅವರ ಕೊಡುಗೆಯೂ ಇದೆ. ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬರುವ ಹಾಗೂ ಈಗಾಗಲೇ ದಶಕಗಳಿಂದ ನೆಲೆಸಿರುವ ಉತ್ತರ ಕರ್ನಾಟಕದ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದ ಅವರು, 25 ಸಾವಿರ ಜನರನ್ನು ಸೇರಿಸಿ ಸಮಾವೇಶ ನಡೆಸುವುದು, ರೊಟ್ಟಿ ಖಾನಾವಳಿ, ಅಂಗಡಿಗಳನ್ನು ತೆರೆಯಲು ಮುಂದಾಗುವವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

ಜನರ ಬೆನ್ನೆಲುಬು: ಮಾಜಿ ಉಪ ಸಭಾಪತಿ ವೀರಣ್ಣ ಮತ್ತೀಕಟ್ಟಿ ಮಾತನಾಡಿ, ಚಂದ್ರಶೇಖರ ಸಾಂಬ್ರಾಣಿ ಸ್ನೇಹಜೀವಿ, ಪ್ರಾಮಾಣಿಕ ಮನುಷ್ಯ ಆಗಿದ್ದರು. ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನರಿಗೆ ಬೆನ್ನೆಲುಬಾಗಿದ್ದರು. ರಾಜಕೀಯದಲ್ಲೂ ಸಕ್ರಿಯರಾಗಿದ್ದರು ಎಂದು ಮೆಲುಕು ಹಾಕಿದರು. ಮಾಜಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಮಾತನಾಡಿ, ಎರಡು ದಶಕಗಳ ಹಿಂದೆ ರೊಟ್ಟಿ ಪಂಚಮಿಯಲ್ಲಿ ನನ್ನ ಮತ್ತು ಸಾಂಬ್ರಾಣಿ ಅವರ ಪರಿಚಯವಾಗಿತ್ತು. ಅವರು ಹಮ್ಮಿಕೊಳ್ಳುವ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ನಾನು ಅತ್ಯಂತ ಸಂತೋಷದಿಂದ ಭಾಗವಹಿಸುತ್ತಿದ್ದೆ ಎಂದು ಹೇಳಿದರು.

ನಿವೃತ್ತ ನ್ಯಾಯಾಧೀಶ ವಿರುಪಾಕ್ಷಪ್ಪ ಎಚ್‌. ಸಾಂಬ್ರಾಣಿ, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಡಿ.ಶಾಂತಗಿರಿ, ವಾಸ್ತು ಶಿಲ್ಪಿ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು. ರಾಜಾಜಿನಗರದ ದಾಸಾಶ್ರಮ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಉ.ಕ ನಾಗರಿಕರ ಅಭಿವೃದ್ಧಿ ಸಂಘದಿಂದ ಕಾರ್ಯಕ್ರಮ „ ಭವನ ನಿರ್ಮಾಣದ ಕನಸು ನನಸು ಮಾಡಿದರೆ ಮಾತ್ರ ಸಾಂಬ್ರಾಣಿ ಅವರಿಗೆ ಸಲ್ಲುವ ನಿಜವಾದ ಶ್ರದ್ಧಾಂಜಲಿ: ಜಗದೀಶ್‌ ಶೆಟ್ಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next