Advertisement

200 ಕೋಟಿ ವ್ಯಯಿಸಿ ತಯಾರಿಸಿದ ಜಾತಿ ಗಣತಿ ಬಹಿರಂಗಪಡಿಸಿ: ಶೆಟ್ಟರ್

10:59 AM Mar 17, 2018 | |

ಹುಬ್ಬಳ್ಳಿ: ಅಂದಾಜು 200 ಕೋಟಿ ರೂ. ವೆಚ್ಚ ಮಾಡಿ ತಯಾರಿಸಿರುವ ಜಾತಿ ಗಣತಿ ಸಮೀಕ್ಷೆ ವರದಿಯನ್ನು ಯಾವಾಗ ಬಹಿರಂಗ ಪಡಿಸಲಾಗುವುದು ಎಂಬುದನ್ನು ತಿಳಿಸಲಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ
ಸವಾಲು ಹಾಕಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ನೇಮಕಗೊಂಡಿದ್ದ ನ್ಯಾ| ನಾಗಮೋಹನ ದಾಸ ನೇತೃತ್ವದ ಸಮಿತಿ ವರದಿಯಲ್ಲಿ ಜಾತಿ ಗಣತಿಯ ವಿಷಯಗಳು ಪ್ರಸ್ತಾಪಗೊಂಡಿವೆ. ಜಾತಿ ಗಣತಿ ಬಹಿರಂಗಪಡಿಸುವುದಕ್ಕೆ ಹಿಂಜರಿಕೆ ಯಾಕೆ ಎಂದು ಪ್ರಶ್ನಿಸಿದರು.

ಅರ್ಕಾವತಿ ಬಡಾವಣೆ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿತ್ತು. ಸುಮಾರು 650 ಎಕರೆಯಷ್ಟು ಜಮೀನು ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಲಾಗಿದ್ದು, ನಮ್ಮ ಹೋರಾಟದಿಂದಾಗಿ ನ್ಯಾ| ಕೆಂಪಣ್ಣವರ ನೇತೃತ್ವದ ಆಯೋಗ ರಚನೆ ಮಾಡಲಾಗಿತ್ತು. ಆಯೋಗ ವರದಿ
ನೀಡಿದ್ದರೂ ಅದು ಬಹಿರಂಗಗೊಂಡಿಲ್ಲ. 

ಬದಲಾಗಿ ಮಾಧ್ಯಮದವರಿಗೆ ವರದಿಯಲ್ಲಿ ಸಿಎಂಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಮುಖ್ಯಮಂತ್ರಿಗೆ ಆಯೋಗ ಕ್ಲೀನ್‌ ಚಿಟ್‌ ನೀಡಿದರೆ ವರದಿ ಯಾಕೆ ಜನರ ಮುಂದಿಡುತ್ತಿಲ್ಲ ಎಂದರು.
 
ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ತಾನೇ ನಂಬರ್‌ ಒನ್‌ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇತ್ತೀಚಿನ ಸಮೀಕ್ಷೆ ಪ್ರಕಾರ 8ನೇ ಸ್ಥಾನದಲ್ಲಿದೆ. ಕೋಮುಗಲಭೆಗಳಲ್ಲಿ 2ನೇ ಸ್ಥಾನದಲ್ಲಿದೆ. ಉತ್ತಮ ನಗರಾಡಳಿತದಲ್ಲಿ ದೇಶದ 23 ಮಹಾನಗರಗಳಲ್ಲಿ ಬೆಂಗಳೂರು ಕೊನೆ ಸ್ಥಾನದಲ್ಲಿದೆ. ಇಷ್ಟಿದ್ದರೂ ಸಿಎಂ ಬೋಗಸ್‌ ಹೇಳಿಕೆ ನೀಡುತ್ತಲೇ ಸಾಗಿದ್ದಾರೆ ಎಂದರು. 

ಗುತ್ತಿಗೆದಾರರ ಮೂಲಕ ಕಾಂಗ್ರೆಸ್‌ ಟಿಕೆಟ್‌ಗಳ ಮಾರಾಟ ಕುರಿತಾಗಿ ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ. 
 ಜಗದೀಶ ಶೆಟ್ಟರ, ಪ್ರತಿಪಕ್ಷ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next