ವಾಡಿ: ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಹಾಗೂ ಎಐಡಿವೈಒ ಮುಖಂಡರು ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲು ಗುರುವಾರ ಕಲಬುರಗಿಗೆ ಆಗಮಿಸಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವಾಡಿ ನಗರ ಘಟಕದ ಎಐಡಿಎಸ್‌ಒ ವಿದ್ಯಾರ್ಥಿ ಮುಖಂಡರು, ಕಳೆದ ಹದಿನೈದು ವರ್ಷಗಳಿಂದ ಸರಕಾರಿ ಕಾಲೇಜಿಗಾಗಿ ಹೋರಾಡುತ್ತಿದ್ದೇವೆ. ಪ್ರತಿ ವರ್ಷವೂ ನಿಮಗೆ ಮತ್ತು ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ನೀಡುತ್ತಿದ್ದೇವೆ. ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ವಾಡಿ ಪಟ್ಟಣದ ವಿದ್ಯಾರ್ಥಿಗಳ ಸರಕಾರಿ ಕಾಲೇಜಿನ ಬೇಡಿಕೆ ಯಾವಾಗ ಪೂರೈಸುತ್ತೀರಿ ಎಂದು ನೇರವಾಗಿಯೇ ಪ್ರಶ್ನಿಸಿದ ಪ್ರಸಂಗ ನಡೆಯಿತು.
ವಾಡಿ ಪಟ್ಟಣದದಲ್ಲಿ ಹತ್ತಾರು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಸಾವಿರಾರು ಮಕ್ಕಳು ಪ್ರೌಢ ಶಿಕ್ಷಣ ಪೂರ್ಣಗೊಳಿಸಿ ಕಾಲೇಜಿಗಾಗಿ ಜಿಲ್ಲಾ ಕೇಂದ್ರಕ್ಕೆ ಒಲಸೆ ಹೋಗುತ್ತಿದ್ದಾರೆ. ಹೆಣ್ಣುಮಕ್ಕಳು ಎಸ್ ಎಸ್‌ಎಲ್‌ಸಿ ನಂತರ ಕಾಲೇಜಿನ ಸೌಲಭ್ಯ ಇಲ್ಲದ್ದಕ್ಕೆ ಶಿಕ್ಷಣ ಸ್ಥಗಿತಗೊಳಿಸುತ್ತಿದ್ದಾರೆ. ಖಾಸಗಿ ಕಾಲೇಜುಗಳಿಗೆ ಪರವಾನಿಗೆ ನೀಡುವ ಸರಕಾರ, ಸರಕಾರಿ ಕಾಲೇಜು ಸ್ಥಾಪನೆಗೇಕೆ ಹಿಂದೇಟು ಹಾಕುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.
ವಾಡಿಯಲ್ಲಿ ಸರಕಾರಿ ಕಾಲೇಜು ಸ್ಥಾಪಿಸಲು ಎಲ್ಲ ಅನುಕೂಲಗಳಿವೆ. ಸರಕಾರ ಮಾತ್ರ ಮನಸ್ಸು ಮಾಡುತ್ತಿಲ್ಲ. ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಬಡ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನೀವಾದರೂ ಕ್ರಮಕೈಗೊಳ್ಳಿ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಲ್ಲಿನಾಥ ಸಿಂಗೆ ಸಂಸದ ಖರ್ಗೆ ಅವರ ಗಮನ ಸೆಳೆದರು.
ಎಐಡಿಎಸ್‌ಒ ವಾಡಿ ಸಮಿತಿ ಅಧ್ಯಕ್ಷ ಶರಣು ಹೇರೂರ, ಎಐಡಿವೈಒ ಕಾರ್ಯದರ್ಶಿ ಶರಣು ವಿ.ಕೆ., ವಿದ್ಯಾರ್ಥಿ ಮುಖಂಡರಾದ ಹಣಮಂತ ಎಸ್.ಎಚ್., ಮಲ್ಲಿನಾಥ ಹುಂಡೇಕಲ್, ರಾಜು ಒಡೆಯರ, ಗೌತಮ ಪರತೂರಕರ, ವೆಂಕಟೇಶ ಆರ್.ಜಿ., ಅರುಣ ಹಿರೆಬಾನರ, ಗೋವಿಂದ
ಯಳವಾರ, ಬಸವರಾಜ ನಾಟೇಕರ, ಶ್ರೀಶೈಲ ಕಡಬೂರ ನಿಯೋಗದಲ್ಲಿದ್ದರು.