Advertisement

ನಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಮನವಿ

05:24 PM Jul 05, 2018 | |

ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಒಳಚರಂಡಿ ಹಾಗೂ ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆ ಬಗೆಹರಿಸಲು ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ ಅವರಿಗೆ ಮನವಿ ಮಾಡಿದರು. ಬುಧವಾರ ವಿಧಾನ ಸಭೆಯಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕರು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿದೆ. ಇದಕ್ಕೆ ಕೂಡಲೇ ಪರಿಹಾರ ನೀಡಬೇಕು. ಜೊತೆಗೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಎಲ್ಲರಿಗೂ ಸರಿಸಮನಾಗಿ ನೀರು ಹಂಚಿಕೆ ಮಾಡಲು ಕ್ರಮ ಜರುಗಿಸಬೇಕು ಎಂದು ಹೇಳಿದರು.

Advertisement

ನಗರದಲ್ಲಿ ಈಗ ಕೇವಲ 10 ವಾರ್ಡ್ಗಳಲ್ಲಿ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಈ ಯೋಜನೆಯನ್ನು ಎಲ್ಲ 58 ವಾರ್ಡ್ ಗಳಲ್ಲಿ ವಿಸ್ತರಿಸಲು ಮರು ಟೆಂಡರ್‌ ಕರೆದು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಮತಕ್ಷೇತ್ರದಲ್ಲಿ ನೇಕಾರ ಕುಟುಂಬಗಳಿಗೆ ವಿಶೇಷವಾದ ವಸತಿ ಸಮುಚ್ಚಯ ನಿರ್ಮಿಸಿ, ದಕ್ಷಿಣ ಮತಕ್ಷೇತ್ರದ ಬಡ ಕುಟುಂಬಗಳಿಗೆ ಹೆಚ್ಚುವರಿ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು. ನಗರದಲ್ಲಿ ಸ್ವಚ್ಛತಾ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಸ್ಮಾರ್ಟ್‌ಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯು. ಟಿ. ಖಾದರ ಮುಂದಿನ ವಾರ ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿ, ನಗರದ ಸ್ವಚ್ಛತಾ ಕಾಮಗಾರಿ ಸೇರಿದಂತೆ ಪಾಲಿಕೆಯ ಪ್ರಗತಿ ಪರಶೀಲನೆ ಮಾಡುವ ಮೂಲಕ ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next