ಯಾದಗಿರಿ: ಕೇಂದ್ರ ಸರ್ಕಾರವು ಯಾದಗಿರಿ ಜಿಲ್ಲೆಯ ಕಡೆಚೂರುನಲ್ಲಿ ವಿಶ್ವದರ್ಜೆಯ ಬೃಹತ್ ಔಷಧ ಪಾರ್ಕ್ ಅಭಿವೃದ್ಧಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮನವಿ ಮಾಡಿದ್ದಾರೆ.
ಕೇಂದ್ರ ರಸಾಯನ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬ ಅವರನ್ನು ಇತ್ತೀಚೆಗೆ ನವದೆಹಲಿಯಲ್ಲಿ ಭೇಟಿಯಾದ ಅವರು, ಯಾದಗಿರಿ ಜಿಲ್ಲೆಯ ಕಡೆಚೂರಿನಲ್ಲಿ ಬೃಹತ್ ಔಷಧ ಪಾರ್ಕ್ ನಿರ್ಮಿಸಿದರೆ ಈ ಭಾಗಕ್ಕೆ ಹೆಚ್ಚಿನ ನ್ಯಾಯ ಸಿಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ಯಾದಗಿರಿ ಜಿಲ್ಲೆಯು ಹಿಂದುಳಿದ ಕರ್ನಾಟಕ ಜಿಲ್ಲಾ ವ್ಯಾಪ್ತಿಗೆ ಒಳಪಡಲಿದೆ. 2 ಮತ್ತು 3ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಿ ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಹೂಡಿಕೆದಾರರನ್ನು ಆಕರ್ಷಿಸಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂಬುದನ್ನು ಸಚಿವರಿಗೆ ವಿವರಿಸಿದರು. ಯೋಜನೆ ಅನುಷ್ಟಾನಗೊಂಡರೆ ಸುಮಾರು 6 ಸಾವಿರ ಕೋಟಿ ಬಂಡವಾಳವನ್ನು ಆಕರ್ಷಣೆ ಮಾಡಬಹುದು. ಅಂದಾಜು 10 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ್ ಯೋಜನೆಯಡಿ ಇದನ್ನು ಕೈಗೆತ್ತಿಕೊಂಡರೆ ಉದ್ಯೋಗ ಕ್ರಾಂತಿಯೇ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯು ಕಲಬರುಗಿ ನಗರಕ್ಕೆ ಸಮೀಪದಲ್ಲಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೇರಿಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದೆ. ರಾಜ್ಯ ಸರ್ಕಾರವು ಔಷಾಧಾಲಯ ಕಾರ್ಖಾನೆಗಳಿಗೆ ಎಲ್ಲ ರೀತಿಯ ನೆರವು ನೀಡಲಿದೆ. ಈ ಯೋಜನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಸಚಿವರಿಗೆ ನಿರಾಣಿ ಮನವರಿಕೆ ಮಾಡಿದರು.
ತುಮಕೂರು ಮಿಷನ್ ಟೂಲ್ ಪಾರ್ಕ್, ರಾಜ್ಯದಲ್ಲಿ ಈಗಾಗಲೇ ತುಮಕೂರು ಮಿಷನರಿ ಟೋಲ್ ಪಾರ್ಕ್, ಹೈಟೆಕ್ ರಕ್ಷಣಾ ಮತ್ತು ವೈಮಾನಿಕ ಪಾರ್ಕ್, ಜಪಾನೀಸ್ ಕೈಗಾರಿಕಾ ಟೌನ್‍ಶಿಪ್ ಸೇರಿದಂತೆ ಹತ್ತು ಹಲವು ಯೋಜನೆಗಳು ನಿರ್ಮಾಣವಾಗಿದೆ.
ಯಾದಗಿರಿಯ ಕಡೆಚೂರಿನಲ್ಲಿ ವಿಶ್ವದರ್ಜೆಯ ಔಷಧಾಲಯ ಪಾರ್ಕ್ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ಆರ್ಥಿಕ ನೆರವು ನೀಡಲು ಸಿದ್ದವಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಯೋಜನೆ ಪ್ರಾರಂಭಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಭಗವಂತ ಕೂಬ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಯೋಜನೆಯನ್ನು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸುವ ಭರವಸೆಯನ್ನು ನೀಡಿದರು.