ವಿಜಯಪುರ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಸಂಘದ ನೇತೃತ್ವದಲ್ಲಿ ನೌಕರರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಡಿಡಿಪಿಐ ಎನ್.ಬಿ. ಹೊಸೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಅಲ್ಲದೇ ಮಾ. 4ರಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಾನಂದ ಗುಡ್ಡೋಡಗಿ ಮಾತನಾಡಿ, 1-4-2004ಕ್ಕೂ ಮೊದಲು ನೇಮಕವಾಗಿ, ನಂತರ ಅನುದಾನಕ್ಕೊಳಪಟ್ಟ ನೌಕರರ ಅನುದಾನರಹಿತ ಸೇವೆಯನ್ನು ಕಾಲ್ಪನಿಕವಾಗಿ ನಿಗದಿಪಡಿಸಿ ಹಳೆಯ ನಿವೃತ್ತಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2006ರ ಪೂರ್ವದಲ್ಲಿ ಅಧಿ ಸೂಚನೆ ಹೊರಡಿಸಿ ಕಾರಣಾಂತರಗಳಿಂದ 2006ರ ನಂತರದಲ್ಲಿ ನೇಮಕಾತಿ ಹೊಂದಿದ ನೌಕರರಿಗೆ ಹಳೆಯ ಪಿಂಚಣಿಯನ್ನು ಪರಿಗಣಿಸುವಂತೆ ಆದೇಶದಲ್ಲಿ ಕಾಣಿಸಿದ ಅಂಶಗಳನ್ನು ಅನುದಾನಿತ ಶಾಲಾ ಕಾಲೇಜಿನ ನೌಕರರಿಗೆ ವಿಸ್ತರಿಸುವುದು. ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬಸ್ಥರಿಗೆ ನೀಡಿದ ಜ್ಯೋತಿ ಸಂಜೀವಿನಿ ಮತ್ತು ವೈದ್ಯಕೀಯ ಬಿಲ್ ಮರು ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಶಾಲಾ ಮಕ್ಕಳಿಗೂ ವಿಸ್ತರಿಸಬೇಕು. ಸರ್ಕಾರಿ ನೌಕರರಿಗೂ ಇರುವಂತೆ ಅನುದಾನಿತ ಶಾಲಾ ಸಿಬ್ಬಂದಿಗಳಿಗೂ ಕೆಜಿಐಡಿ ಸೌಲಭ್ಯ ವಿಸ್ತರಿಸಬೇಕು. ಅನುದಾನಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಸರ್ಕಾರಿ ನೌಕರರಿಗೆ ನೀಡುವಂತೆ ಎಲ್ಲ ತರಬೇತಿ ನೀಡಬೇಕು. ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 31-12- 2021ರ ಪೂರ್ವದಲ್ಲಿ ಖಾಲಿಯಾಗಿರುವ ಎಲ್ಲ ಹುದ್ದೆ ಭರ್ತಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಕಾರ್ಯದರ್ಶಿಗಳಾದ ಬಸವರಾಜ ವಾಲೀಕಾರ, ಮೋಹನ ಜಾಧವ, ಎಸ್.ವಿ. ಬುರ್ಲಿ, ಎಂ.ಐ. ಪಾರಶೆಟ್ಟಿ ಸೇರಿದಂತೆ ಇತರರು ಇದ್ದರು.