ಬಳ್ಳಾರಿ: ಅನುದಾನರಹಿತ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30ಕ್ಕೆ ಇಳಿಸಬೇಕು ಎಂದು ಆದೇಶಿಸಿರುವ ರಾಜ್ಯ ಸರ್ಕಾರ, ಈಗಾಗಲೇ ನಷ್ಟದಲ್ಲಿರುವ ಇರುವ ಖಾಸಗಿ ಶಾಲೆಗಳ ಚೇತರಿಕೆಗೆ ಸೂಕ್ತ ಅನುದಾನ ನೀಡಬೇಕು. ಅಥವಾ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದ್ಯಾರ್ಥಿ ಪಾಲಕ, ಪೋಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೋಧನಾ ಶುಲ್ಕವನ್ನು ಶೇ.30ಕ್ಕೆ ಇಳಿಸುವಂತೆ ಹೊರಡಿಸಿರುವ ಆದೇಶವನ್ನು ನಾವು ಸಹ ಸ್ವಾಗತಿಸುತ್ತೇವೆ. ಆದರೆ, ಕೋವಿಡ್ ಸೋಂಕಿನ ಪರಿಣಾಮ ಸ್ಥಗಿತಗೊಂಡಿದ್ದ ಶಾಲೆಗಳಲ್ಲಿ ಈವರೆಗೂ ಪೂರ್ಣ ಪ್ರಮಾಣದಲ್ಲಿ ದಾಖಲಾತಿಯಾಗಿಲ್ಲ. ಕಳೆದ ವರ್ಷ ವಾರ್ಷಿಕ ಪರೀಕ್ಷೆ ವೇಳೆಯೇ ಶಾಲೆಗಳು ಸ್ಥಗಿತೊಂಡಿದ್ದರಿಂದ ಶೇ.50ರಿಂದ 60ರಷ್ಟು ಹಿಂದಿನ ಶುಲ್ಕವೂ ವಸೂಲಿಯಾಗಿಲ್ಲ.
ಇಂತಹ ಸಂದರ್ಭದಲ್ಲಿ ಸರ್ಕಾರ ಪುನಃ ಶುಲ್ಕವನ್ನು ಶೇ.30ಕ್ಕೆ ಇಳಿಸಿದರೆ, ಶಾಲೆಗಳನ್ನು ನಿರ್ವಹಿಸುವುದು ಕಷ್ಟವಾಗಲಿದೆ. ಹಾಗಾಗಿ ಖಾಸಗಿ ಶಾಲೆಗಳಿಗೆ ಅನುದಾನವಾದರೂ ನೀಡಿ ಅಥವಾ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದವರು ಒತ್ತಾಯಿಸಿದ ಅವರು, ಈ ಕುರಿತು ಇದೇ ಫೆ.23 ರಂದು ಬೆಂಗಳೂರಿನಲ್ಲಿ ಬೃಹತ್ ಪಾದಯಾತ್ರೆ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
1995 ರಿಂದ 2016ರ ವರಗಿನ ಎಲ್ಲ ಶಾಲೆಗಳಿಗೆ (ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ) ಶಾಲೆಗಳಿಗೆ ವೇತನಾನುದಾನ ನೀಡಬೇಕು. ಹಳೆಯ ಮತ್ತು ಸ್ವಾಭಾವಿಕವಾಗಿ ಬೆಳೆದು ಬಂದಂತಹ ಶಾಲೆಗಳಿಗೆ ಹೊಸ ನಿಯಮಗಳಿಂದ ರಿಯಾಯಿತಿ ನೀಡಬೇಕು. 1 ರಿಂದ 5 ನೇ ತರಗತಿಗಳನ್ನು ಈ ಕೂಡಲೇ ಆರಂಭಿಸಬೇಕು. ವಿದ್ಯಾರ್ಥಿಗಳ ಪೋಷಕರು ಸಹ 2019-20ನೇ ಸಾಲಿನ ಬಾಕಿ ಶುಲ್ಕವನ್ನು ಪಾವತಿಸಬೇಕು. ಪ್ರಸಕ್ತ 2020-21ನೇ ಸಾಲಿಗೆ ಮಕ್ಕಳ ದಾಖಲಾತಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮರಿಸ್ವಾಮಿರೆಡ್ಡಿ, ಮನ್ನೆ ಶ್ರೀನಿವಾಸ್, ಖಜಾಂಚಿ ರಂಜಾನ್‌ಸಾಬ್, ಕುರುಗೋಡು ಅಧ್ಯಕ್ಷ ಚಕ್ರವರ್ತಿ, ಪರಮೇಶ್ವರಪ್ಪ, ಗಂಗಣ್ಣ, ಹನುಮಂತಪ್ಪ, ವರ್ಮಾ, ನಾಗಭೂಷಣ, ಹಂಪಾರೆಡ್ಡಿ, ಗಾಯತ್ರಿ, ಪ್ರಭಾ ಪಾಟೀಲ್, ಖುರ್ಷಿದ್ ಸೇರಿ ಹಲವರು ಇದ್ದರು.