ಪುತ್ತೂರು : ಕೋರ್ಟ್ ಹಿಲ್‌ನ ಶಿವರಾವ್ ಸರ್ಕಲ್ ಬಳಿಯ ಅಪಾಯಕಾರಿ ಸ್ಥಿತಿಯ ಚರಂಡಿಯನ್ನು ಸರಿಪಡಿಸಲು
ಹಾಗೂ ಪೊಲೀಸ್ ವಸತಿ ಬಳಿಯ ರಸ್ತೆಯ ಅಂಚಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಮನವಿ ನೀಡಲಾಗಿದೆ.
ಕೋರ್ಟ್ ಹಿಲ್‌ನ ಶಿವರಾವ್ ಸರ್ಕಲ್ ಬಳಿಯ ಚರಂಡಿ ಮೇಲೆ ಪಾದಚಾರಿಗಳು ನಡೆದಾಡಲು ಹಾಕಿರುವ ಕಾಂಕ್ರೀಟ್ ಹಲಗೆಗಳ ಹಾಸು ಎರಡು ವರ್ಷಗಳಿಂದ ಅಪೂರ್ಣವಾಗಿದೆ. ಇದನ್ನು ಸರಿಪಡಿಸುವ ಅಥವಾ ಪೂರ್ಣಗೊಳಿಸುವ ತುರ್ತು ಅಗತ್ಯವಿದೆ. ಚರಂಡಿಯ ನೀರು ಮೇಲಿನಿಂದ ಕೆಳಕ್ಕೆ ಧುಮುಕುವ ಪ್ರದೇಶ. ಇಲ್ಲಿ ಚರಂಡಿ ಅಪೂರ್ಣ ಕಾಮಗಾರಿಯಿಂದ ಪಾದಚಾರಿಗಳು, ಮಕ್ಕಳಿಗೆ ಮರಣಗುಂಡಿಯಂತಾಗಿದೆ. ತತ್‌ಕ್ಷಣಕ್ಕೆ ಈ ಹೊಂಡ ಗಮನಕ್ಕೆ ಬಾರದೇ ಇರುವುದರಿಂದ, ಪಾದಚಾರಿಗಳು ಹೊಂಡಕ್ಕೆ ಬೀಳುವ ಸಾಧ್ಯತೆ ಅಧಿಕ. ಇದು ತುಂಬಾ ಆಳವಾಗಿ ಇರುವುದರಿಂದ ಅಪಾಯ ಹೆಚ್ಚು. ಆದ್ದರಿಂದ ಚರಂಡಿಗೆ ಕಾಂಕ್ರೀಟ್ ಹಲಗೆ ಹಾಕುವಂತೆ ಒತ್ತಾಯಿಸಿದ್ದಾರೆ.
ಇದೇ ರಸ್ತೆಯ ಇನ್ನೊಂದು ಬದಿಯಲ್ಲಿರುವ ಪೊಲೀಸ್ ವಸತಿ ಬಳಿಯ ರಸ್ತೆ ಸುಮಾರು 15 ಅಡಿ ಎತ್ತರದಲ್ಲಿದೆ. ಈ ಫುಟ್‌ಪಾತ್‌ನಲ್ಲಿ ನಡೆಯುವ ಪಾದಚಾರಿಗಳಿಗೂ ಇದು ಅಪಾಯ. ರಸ್ತೆಯ ಕೆಳಭಾಗ ಆಳವಾಗಿದ್ದು, ಆಯ ತಪ್ಪಿದರೆ 15 ಅಡಿ ಕೆಳಗೆ ಬೀಳುವ ಅಪಾಯವಿದೆ. ಆದ್ದರಿಂದ ಇಲ್ಲಿ ತಡೆಗೋಡೆ ನಿರ್ಮಿಸುವಂತೆ ವಕೀಲ ಸುಧೀರ್ ಒತ್ತಾಯಿಸಿದ್ದಾರೆ.
ಈ ಹಿಂದೆಯೂ ಮನವಿ ಮಾಡಲಾಗಿತ್ತು. ಆದರೆ ಪೂರಕ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಮನವಿ ನೀಡಲಾಗಿದೆ. ಈ ಎರಡು ಕಾಮಗಾರಿಗಳ ಬಗ್ಗೆ ನಗರಸಭೆ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ, ಸೂಕ್ತ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಇದರ ನಡುವೆ ಎದುರಾಗುವ ಎಲ್ಲ ಕಷ್ಟ-ನಷ್ಟಗಳಿಗೆ ನಗರಸಭೆ ಪೌರಾಯುಕ್ತರೇ ಜವಾಬ್ದಾರರು ಎಂದು ಎಚ್ಚರಿಸಲಾಗಿದೆ. ಇದನ್ನು ಸಿವಿಲ್ ಪ್ರಕ್ರಿಯಾ ಸಂಹಿತೆ 1908ರ ಕಲಂ 80ರ ಅಡಿಯಲ್ಲಿ ನೋಟಿಸ್ ಎಂದು ಪರಿಗಣಿಸಬೇಕು ಎಂದು ವಕೀಲ ಸುಧೀರ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.