ಮಧುಗಿರಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಇದೇ ಸೆ.28 ಸೋಮವಾರ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಹಲವಾರು ಸಂಘಟನೆಗಳು ರೈತರಿಗೆ ಬೆಂಬ ವ್ಯಕ್ತಪಡಿಸಿದೆ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಶಂಕರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಪೋರೆಟ್ ಸಂಸ್ಥೆಗಳಿಗೆ ಅನುಕೂಲವಾಗುವ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಕಾರ್ಮಿಕರೂ ಸಹ ಬೀದಿಯಲ್ಲಿ ಬಿದ್ದಿದ್ದಾರೆ ಹಾಗೂ ವಿದ್ಯುತ್, ಎಪಿಎಂಸಿ, ಬೀಜ ಕಾಯ್ದೆ ತಿದ್ದುಪಡಿ ಹಾಗೂ ಭೂ ಸುಧಾರಣಾ ಕಾಯ್ದೆಯಿಂದ ರೈತರ ಮಾರಣ ಹೋಮ ನಡೆಸಲು ಹಾಗೂ ಕೃಷಿಯನ್ನು ಕಾರ್ಪೋರೆಟ್ ಸಂಸ್ಥೆಗೆ ಮಾರಾಟ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ನೂತನ ವಿದ್ಯುತ್ ಕಾಯ್ದೆಯ ಪ್ರಕಾರ ರಾಜ್ಯದ ಸುಮಾರು 30 ಲಕ್ಷ ಕೃಷಿ ಪಂಪ್‌ಸೆಟ್ ಗಳು ಉಚಿತ ವಿದ್ಯುತ್ ವಿನಾಯಿತಿ ಕಳೆದುಕೊಳ್ಳಲಿವೆ. ಇದರಿಂದ ರೈತರು ಬೀದಿ ಬರಲಿದ್ದು, ಬೆಳೆಗೆ ನಿಗದಿತ ಮೌಲ್ಯವಿಲ್ಲದೆ ಅನ್ನದಾತ ಕೃಷಿಯನ್ನು ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡಿ ಅವರಿಗೆ ಗುಲಾಮರಾಗಬೇಕಾಗುತ್ತದೆ. ಇಂಥ ಪರಿಸ್ಥಿತಿಯು ಈ ಸರ್ಕಾರದ ನೂತನ ಕಾಯ್ದೆಗಳಿಂದ ಬರಲಿದ್ದು, ಸರ್ಕಾರದ ಈ ಎಲ್ಲ ನಿಯಮಗಳ ವಿರುದ್ಧ ರೈತರು ಸೆ.28 ರಂದು ಬೀದಿಗಿಳಿದು ಹೋರಾಟ ಮಾಡಿ ರಾಜ್ಯ ಬಂದ್ ಗೆ ಕರೆ ನೀಡಿದ್ದೇವೆ. ಅಂದು ಹಲವಾರು ಸಂಘ ಸಂಸ್ಥೆಗಳು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಸಹ ರೈತರ ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ಜಿಲ್ಲಾ ಮಹಿಳಾಧ್ಯಕ್ಷೆ ನಾಗರತ್ನಮ್ಮ, ತಾ. ಅಧ್ಯಕ್ಷ ರಾಜಶೇಖರ್, ತಾ. ಮಹಿಳಾಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಡಿಎಸ್‌ಎಸ್ ಸಂಚಾಲಕ ದೊಡ್ಡೇರಿ ಕಣಿಮಯ್ಯ, ಸಂಜೀವಯ್ಯ, ಮುಖಂಡರಾದ ನಾಗರಾಜು, ಚಿನ್ನಪ್ಪರೆಡ್ಡಿ, ಚಿಕ್ಕಣ್ಣ, ನಾಗಭೂಷಣ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬೆಟ್ಟಪ್ಪ, ನರಸಿಂಹಮೂರ್ತಿ ಇದ್ದರು.