Advertisement

ಅಮಾನತು ಆದೇಶ ಹಿಂಪಡೆಯಲು ಆಗ್ರಹಿಸಿ ಮನವಿ

05:15 PM Mar 11, 2022 | Shwetha M |

ಮುದ್ದೇಬಿಹಾಳ: ತಾಳಿಕೋಟೆ ತಾಲೂಕು ಚೊಕಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಾಧ್ಯಾಪಕ ಎಸ್‌.ಎಸ್‌. ತೀರ್ಥ ಅವರ ಅಮಾನತು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಗ್ರಾಮಸ್ಥರು, ಪಾಲಕರು, ರೈತ ಸಂಘದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಗುರುವಾರ ಬಿಇಒ ಕಚೇರಿಗೆ ತೆರಳಿ ಬಿಇಒ ಹಣಮಂತಗೌಡ ಮಿರ್ಜಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈಚೆಗೆ ತಾಳಿಕೋಟೆ ಬಳಿ ಶಾಲಾ ಮಕ್ಕಳು ಪಿಕ್ನಿಕ್‌ಗೆ ತೆರಳುತ್ತಿದ್ದ ವಾಹನ ಅಪಘಾತದಲ್ಲಿ ಕ್ಲೀನರ್‌ ಮೃತಪಟ್ಟು ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದ ಹಿನ್ನೆಲೆ ಮೇಲಧಿಕಾರಿಗಳ ಅನುಮತಿ ಪಡೆಯದೇ ಮಕ್ಕಳನ್ನು ಪ್ರವಾಸಕ್ಕೆ ಕಳಿಸಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ತೀರ್ಥ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ನಮ್ಮೆಲ್ಲರ ಬೇಡಿಕೆಯಂತೆ ಅಮಾನತು ಆದೇಶ ಹಿಂಪಡೆಯದೇ ಹೋದಲ್ಲಿ ನಾವೆಲ್ಲರೂ ಸೇರಿ ಮಕ್ಕಳ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆಗಮಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಆಮರಣ ಉಪವಾಸ ಸತ್ಯಾಗ್ರಹ, ತಮಟೆ ಚಳವಳಿ ಸೇರಿ ಹಲವು ಹಂತದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ವೇಳೆ ಇದ್ದ ಮುಖಂಡರು ತಿಳಿಸಿದರು.

ಬಿಇಒ ಹಣಮಂತಗೌಡ ಮಿರ್ಜಿ ಮನವಿ ಸ್ವೀಕರಿಸಿ ಮಾತನಾಡಿ, ಶಾಲೆಗೆ ಭೇಟಿ ನೀಡಿ ಮಕ್ಕಳು, ಪಾಲಕರಿಂದ ವರದಿ ಪಡೆದು ಯೋಗ್ಯ ನಿರ್ಣಯ ಮಾಡುತ್ತೇನೆ. ಇದಕ್ಕಾಗಿ ನನಗೆ ಒಂದು ವಾರ ಕಾಲಾವಕಾಶ ಕೊಡಬೇಕು. ಅಲ್ಲಿವರೆಗೂ ಎಲ್ಲರೂ ತಾಳ್ಮೆಯಿಂದ ನಡೆದುಕೊಳ್ಳಬೇಕು. ತೀರ್ಥ ಅವರನ್ನು ಅಮಾನತುಗೊಳಿಸುವುದಕ್ಕೂ ಮುನ್ನ ಅವರ ಮೇಲೆ ಬಂದಿರುವ ಆರೋಪಗಳ ಕುರಿತು ಕೂಲಂಕಷವಾಗಿ ತನಿಖೆ ನಡೆಸಿಯೇ ಕ್ರಮ ಕೈಗೊಳ್ಳಲಾಗಿದೆ. ಈಗ ಮತ್ತೊಮ್ಮೆ ಖುದ್ದು ನಾನೇ ಹೋಗಿ ವಿವರವಾದ ಮಾಹಿತಿ ಸಂಗ್ರಹಿಸುತ್ತೇನೆ ಎಂದು ಭರವಸೆ ನೀಡಿದರು.

ನಮಗೆ ಎಷ್ಟು ದಿನಗಳಲ್ಲಿ ಬೇಡಿಕೆ ಈಡೇರಿಸುತ್ತೀರಿ ಎನ್ನುವ ಸ್ಪಷ್ಟ ಭರವಸೆ ಕೊಡಬೇಕು. ತೀರ್ಥ ಅವರ ಅಮಾನತು ರದ್ದುಗೊಳ್ಳುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಕೆಲ ಹೊತ್ತಿನ ಮನವೊಲಿಕೆ ನಂತರ ಪರಿಸ್ಥಿತಿ ತಿಳಿಯಾಗಿ ಎಲ್ಲರೂ ಸ್ವಗ್ರಾಮಕ್ಕೆ ತೆರಳಿದರು. ಈ ವೇಳೆ ಮುಖಂಡರಾದ ಸಾಹೇಬಗೌಡ ಬಿರಾದಾರ, ನಾನಾಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಬಸವರಾಜ ತಳವಾರ, 50-60 ಜನರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next