ಸುರಪುರ: ರಂಗಂಪೇಟೆಯ ಎಸ್‌ಬಿಐ ಎಡಿಬಿ ಶಾಖೆಗೆ ಫೀಲ್ಡ್ ಆಫೀಸರ್ ನೇಮಕ ಮಾಡಬೇಕು ಮತ್ತು ಸಾಲ ಪಾವತಿದಾರರಿಗೆ ಮರುಸಾಲ ನೀಡುತ್ತಿಲ್ಲ. ಮರು ಸಾಲ ವಿತರಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಹಿಂದುಳಿದ, ಅಲ್ಪಸಂಖ್ಯಾತ ಒಕ್ಕೂಟದ ಮುಖಂಡರು ಸೋಮವಾರ ಬ್ಯಾಂಕ್ ಎದುರು ಪ್ರತಿಭಟಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಕಳೆದ 20-25 ದಿನಗಳಿಂದ ಬ್ಯಾಂಕ್‌ನಲ್ಲಿ ಸಾಲ ವಿತರಿಸುವ ಫೀಲ್ಡ್ ಆಫೀಸರ್ ಇಲ್ಲ. ಬೆಳೆ ಸಾಲ ಪಡೆದುಕೊಳ್ಳುವ ರೈತರು ನಿತ್ಯ ಬ್ಯಾಂಕ್‌ಗೆ ಅಲೆದು ಸುಸ್ತಾಗಿದ್ದಾರೆ. ವ್ಯವಸ್ಥಾಪಕರು ಪರ್ಯಾಯ ವ್ಯವಸ್ಥೆ ಮಾಡದೇ ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎರಡನೇ ಬೆಳೆ ಬಿತ್ತಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲು ಪಡೆದ ಸಾಲ ಮರುಪಾವತಿಸಿದ್ದು ಪುನಃ ಸಾಲ ಪಡೆಯಲು ಅಲೆಯುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲ ನೀಡದೇ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸಾಲ ಮಂಜೂರಾತಿ ಲೀಡ್ ಬ್ಯಾಂಕ್ ವಹಿಸಿಕೊಂಡಿದೆ. ಅಲ್ಲಿಂದ ಮಂಜೂರಾತಿ ಮಾಡಿಸಿಕೊಂಡು ಬರಬೇಕೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ದೂರಿದರು.
ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂಧಗೇರಿ ಮಾತನಾಡಿ, ಒನ್ ಟೈಂ ಸೆಟಲ್‌ಮೆಂಟ್‌ನಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಮರು ಸಾಲ ನೀಡಲು ಸರ್ಕಾರ ಆದೇಶಿಸಿದೆ. ಬ್ಯಾಂಕ್ ಅಧಿಕಾರಿಗಳು ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಸರ್ಕಾರದ ನಿರ್ದೇಶನದಂತೆ ಪಾವತಿದಾರರಿಗೆ ಮರು ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಫೀಲ್ಡ್ ಆಫೀಸರ್ ನಿಯೋಜಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗೆ ಬರೆದ ಬೇಡಿಕೆ ಮನವಿಯನ್ನು ಶಾಖಾ ವ್ಯವಸ್ಥಾಪಕರಿಗೆ ಸಲ್ಲಿಸಿದರು. ಈ ವೇಳೆ ಶಿವಶಂಕರ ಹೊಸ್ಮನಿ, ಗೋಪಾಲ ಬಾಘಲಕೋಟೆ, ರಾಜು ದರಬಾರಿ ಇತರರಿದ್ದರು.