ರಾಯಚೂರು: ರೈತರ ಬೆಳೆ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ರೈತರ ಬೆಳೆ ಬೆಳೆಯಲು ತಗಲುವ ಉತ್ಪಾದನಾ ವೆಚ್ಚ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದ್ದು, ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಯಾದರೆ ಮಾತ್ರ ರೈತರ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆಯಲ್ಲಿ ವೈಜ್ಞಾನಿಕ ನ್ಯಾಯಯುತ ಬೆಲೆ ನಿಗದಿಯಾಗಿ, ರೈತರು ಇದರಿಂದ ಸಾಲದ ಸುಳಿಗೆ ಸಿಲುಕದೇ, ಲಾಭದಾಯಕ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಬೆಲೆ ನಿಗದಿ ಕಾಯ್ದೆ ಜಾರಿಯಿಂದ ರೈತರ ಆತ್ಮಹತ್ಯೆಗಳು ನಿಲ್ಲುತ್ತವೆ. ರೈತರ ಕೃಷಿಯಿಂದ ವಿಮುಖರಾಗುವುದಿಲ್ಲ. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಲಾಭದಾಯಕ ಬೆಲೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಯಾರಾದರೂ, ಖರೀದಿಸಿದರೆ ಶಿಕ್ಷಾರ್ಹ ಅಪರಾಧವನ್ನಾಗಿಸಬೇಕು ಎಂದರು.
ಮಾರುಕಟ್ಟೆಯಲ್ಲಿ ಕಾಳದಂಧೆ ಅಕ್ರಮಗಳು ನಿಲ್ಲುತ್ತವೆ. ಪ್ರತಿ ವರ್ಷ ಲಾಭದಾಯಕ ಬೆಲೆ ಘೋಷಣೆ ದರಕ್ಕೆ ಅನುಗುಣವಾಗಿರಬೇಕು. ಇದರಿಂದ ರೈತರಿಗೆ ಮಾರುಕಟ್ಟೆಯ ಬೆಲೆ ಅನಿಶ್ಚಿತತೆ ತಪ್ಪುತ್ತದೆ. ಕೂಡಲೇ ಕೇಂದ್ರ ಸರ್ಕಾರ ಲಾಭದಾಯಕ ನಿಗದಿ ಕಾಯ್ದೆ ಜಾರಿಗೆ ತರಲು ರಾಷ್ಟ್ರಪತಿಗಳು ನಿರ್ದೇಶನ ನೀಡಬೇಕು. ಸಮಗ್ರ ಕೃಷಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಸದಸ್ಯರಾದ ಮಂಜುನಾಥ ದಳವಾಯಿ, ಕೃಷ್ಣಾಚಾರ್ಯ, ಮುಖಂಡರಾದ ಗೂಳಪ್ಪಗೌಡ ಜೇಗರಕಲ್, ಕೊಂಡಾರಾಜು, ರಾಮಾಂಜನೇಯ, ಶಂಕ್ರಪ್ಪಗೌಡ, ಮಜ್ಜಿಗಿ ನರಸಪ್ಪ ಇತರರಿದ್ದರು.