ಹೊಸಪೇಟೆ: ಪ.ಜಾತಿ ಹಾಗೂ ಪ.ಪಂಗಡ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ .ನಾಗಮೋಹನದಾಸ್ ಅವರ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ, ದಲಿತ ಹಕ್ಕುಗಳ ಜನಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಎಚ್. ಎನ್.ನಾಗಮೋಹನದಾಸ್ ಅವರ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ದಲಿತ ಸಮುದಾಯಗಳಿಗೆ ಕನಿಷ್ಠ ಶಿಕ್ಷಣ, ಉದ್ಯೋಗ, ಭೂಮಿ, ಆರೋಗ್ಯ, ವಸತಿ ಸೌಲಭ್ಯಗಳು ಸಂಪೂರ್ಣವಾಗಿ ಇನ್ನೂ ದೊರೆತಿಲ್ಲ. ರಾಜ್ಯದಲ್ಲಿ 35 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಎಸ್ಟಿ ಮೀಸಲಾತಿಯನ್ನು ಶೇ. 7.5ಕ್ಕೆ, ಎಸ್ಸಿ ಮೀಸಲಾತಿಯನ್ನು ಶೇ.18ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಆಳುವ ಸರ್ಕಾರಗಳು ಈ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಿಲ್ಲ. ಈಗಿನ ಸರ್ಕಾರ ಕೂಡಲೇ ನ್ಯಾ. ನಾಗಮೋಹನದಾಸ್ ವರದಿಯನ್ನು
ಯಥಾವತ್ತಾಗಿ ಜಾರಿಗೊಳಿಸಬೇಕು. ಜತೆಗೆ ಎಸ್ಸಿ, ಎಸ್ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್ಸಿ, ಎಸ್ಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಹಾಗೂ ಉದ್ಯೋಗ ನೀಡುವವರೆಗೆ ತಿಂಗಳಿಗೆ ಹತ್ತು ಸಾವಿರ ರು. ನಿರುದ್ಯೋಗ ಭತ್ಯೆ ನೀಡಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.75 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯು ಪ್ರತಿ ತಾಲೂಕಿನಲ್ಲಿ ತಾಲೂಕು ಅಧಿಕಾರಿಯನ್ನು ನೇಮಿಸಬೇಕು. ಅರಣ್ಯ ಭೂಮಿ, ಸರ್ಕಾರಿ ಭೂಮಿಗಳಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಕೊಡಬೇಕು.
ಭೂಮಿ, ಮನೆ ನಿವೇಶನ ಇಲ್ಲದ ಎಲ್ಲ ಬಡ ಕುಟುಂಬಗಳಿಗೆ ಭೂಮಿ, ಮನೆ, ನಿವೇಶನ, ಮಂಜೂರು ಮಾಡಬೇಕು. ಕನ್ನಡ ವಿವಿ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯು ಎಸ್ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿ ಹಕ್ಕಿಗೆ ವಿರುದ್ಧವಾಗಿದೆ. ತಕ್ಷಣ ಮೀಸಲಾತಿ ಪ್ರಕ್ರಿಯೆ ರದ್ದುಪಡಿಸಬೇಕು. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟಿರುವ 26005 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಇತರೆ ಯೋಜನೆಗಳಿಗೆ ವರ್ಗಾವಣೆಯಾಗದಂತೆ ನಿರ್ಬಂಧಿ ಸಬೇಕು ಎಂದು ಆಗ್ರಹಿಸಿದರು. ದಲಿತ ಹಕ್ಕುಗಳ ಸಮಿತಿ, ಡಾ| ಬಿ.ಆರ್.ಅಂಬೇಡ್ಕರ್ ಸಂಘ, ತಾಲೂಕು ವಾಲ್ಮೀಕಿ ನಾಯಕರ ಸಮಾಜ, ಸೇವಾಲಾಲ್ (ಲಂಬಾಣಿ) ಸಮಾಜ, ದಲಿತ ಸಂಘರ್ಷ ಸಮಿತಿ (ಭೀಮವಾದ), ಭೋವಿ(ವಡ್ಡರ) ಸಮಾಜ, ಛಲವಾದಿ ಮಹಾಸಭಾ, ಜಾಗೃತ ನಾಯಕ ಬಳಗ, ಎಸ್‌ಸಿ., ಎಸ್‌ಟಿ., ನೌಕರರ ಸಮನ್ವಯ ಸಮಿತಿ, ಬುಡ್ಗ ಜಂಗಮ ಇತರೆ ಅಲೆಮಾರಿ ಸಮುದಾಯ, ಡಿವೈಎಫ್‌ಐ, ಎಸ್‌ಎಫ್‌ಐ,
ಎಸ್‌ಟಿ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ, ಕೊರಮ, ಕೊರಚ ಸಮುದಾಯದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಡಾ| ಚಿನ್ನಸ್ವಾಮಿ ಸೋಸಲೆ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಸಣ್ಣಮಾರೆಪ್ಪ, ಬಿಸಾಟಿ ತಾಯಪ್ಪ ನಾಯಕ, ಕೆ. ನಾಗರತ್ನಮ್ಮ, ಸಣ್ಣಕ್ಕಿ ರುದ್ರಪ್ಪ, ಗಂಟೆ ಸೋಮಶೇಖರ, ವಿ.ರಾಮಕೃಷ್ಣ, ಶಿವಕುಮಾರ್, ಜೆ. ಶಿವಕುಮಾರ್ ಇತರರಿದ್ದರು.