ಆಳಂದ: ಕಳೆದ 20 ವರ್ಷಗಳಿಂದಲೂ ಹೊಲದಲ್ಲಿರುವ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ, ಈ ಕುರಿತು ಸದನದಲ್ಲಿ ಒತ್ತಡ ಹೇರಬೇಕು ಎಂದು ಶಾಸಕ ಸುಭಾಷ ಗುತ್ತೇದಾರಗೆ ಹೋರಾಟ ನಿರತ ಮುಖಂಡರು ಮನವಿ ಸಲ್ಲಿಸಿದರು.
ಶಾಸಕ ಸುಭಾಷ ಗುತ್ತೇದಾರ ನಿವಾಸಕ್ಕೆ ತೆರಳಿದ ಕಿಸಾನಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ನೇತೃತ್ವದ ಹೋರಾಟ ನಿರತ ಮುಖಂಡರ ನಿಯೋಗವು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಗ್ರಾಪಂ ಮಟ್ಟದಲ್ಲಿ ಜೀಪ್ ಜಾಥಾ ಆರಂಭಿಸಲಾಗಿದೆ. ಅಲ್ಲದೇ ಡಿ.11ರಂದು ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಂಪಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಹಲವಾರು ವರ್ಷಗಳಿಂದ ಜೆಸ್ಕಾಂ ಈ ಕುರಿತು ನಿರ್ಲಕ್ಷé ತೋರುತ್ತಿದೆ. ಪರಿವರ್ತಕ ಸುಟ್ಟರೆ, ಹಾಳಾದರೆ ರೈತರಿಂದ ಹಣ ಭರಿಸಿಕೊಳ್ಳುತ್ತಾರೆ. ಅರ್ಜಿ ಸಲ್ಲಿಸಿದ ಕೆಲವು ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಅಲ್ಲದೇ ಉಚಿತ ಪೂರೈಕೆ ಎಂದು ಹೇಳಿ ದಂಡ ವಸೂಲಿಯನ್ನು ಮಾಡುತ್ತಿದ್ದಾರೆ. ಸಮರ್ಪಕ ಸಂಪರ್ಕ ಒದಗಿಸದರೆ ರೈತರು ಏಕೆ ಅಕ್ರಮ ಸಂಪರ್ಕ ಪಡೆಯುತ್ತಾರೆ ಎಂದು ಪ್ರಶ್ನಿಸಿದರು.
ನೀರಾವರಿ ಬೆಳೆಗೆ ವಿದ್ಯುತ್ ಬೇಕೆಬೇಕು. ಇದರಿಂದ ಪಂಪಸೆಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಹಳೆಯ ಟ್ರಾನ್ಸಫಾರ್‌ಂಗಳ ಮೇಲೆ ಭಾರ ಹೆಚ್ಚಾಗಿ ಪದೇ-ಪದೇ ಸುಟ್ಟು ಯಾವ ಬೆಳೆಗೂ ಸಕಾಲಕ್ಕೆ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಪಂಪಸೆಟ್‌ಗಳಿಗೆ ಅಕ್ರಮ-ಸಕ್ರಮ ವಿದ್ಯುತ್ ಸರಬರಾಜು ಪದ್ದತಿ ರದ್ದುಗೊಳಿಸಬೇಕು. ಅರ್ಜಿ ಸಲ್ಲಿಸಿದ ರೈತರಿಗೆ ಸಂಪರ್ಕ ಕಲ್ಪಿಸಿಕೊಟ್ಟು ವಿದ್ಯುತ್ ಸಮರ್ಪಕವಾಗಿ ದೊರೆಯುವಂತೆ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ತಾಲೂಕಿನ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಸಮಪರ್ಕವಾಗಿ ಜಾರಿಗೊಳಿಸಲು ಮತ್ತು ಗುಣಮಟ್ಟದ ಕಾಮಗಾರಿಗೆ ಸೂಚಿಸಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ಶಾಸಕರು ಈ ಕುರಿತು ಸರ್ಕಾರದ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಕಿಸಾನಸಭಾ ತಾಲೂಕು ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಮುಖಂಡ ಫಕ್ರೋದ್ದೀನ್ ಗೊಳ್ಳಾ ಮತ್ತಿತರರು ಇದ್ದರು.