ಯಾದಗಿರಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆಗೆಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಹಲವು ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಇದೇ ವೇಳೆ ಗುರುಮಠಕಲ್ ಖಾಸಾಮಠದ ಶ್ರೀಶಾಂತವೀರ ಸ್ವಾಮೀಜಿ ಮಾತನಾಡಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡಿಸಿದ ಕ್ರಮ ಖಂಡನೀಯ. ಜನರಿಗೆ ನ್ಯಾಯ ಒದಗಿಸಬೇಕಾದವರು ಈ ರೀತಿ ಮಾಡಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ರಾಷ್ಟ್ರೀಯ ಹಬ್ಬದಲ್ಲೂ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಡಾ| ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕು. ರಾಯಚೂರಿನ ಜಿಲ್ಲಾ ನ್ಯಾಯಾಧೀಶರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಎಲ್ಲ ನ್ಯಾಯಾಲಯಗಳ ಮುಂದೆ ಡಾ| ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಆತ್ಮನಂದ ಸ್ವಾಮಿಗಳು ವಾಲ್ಮೀಕಿ ಶಾಖಮಠ ಮಸ್ಕಿ, ಎ.ಸಿ. ಕಾಡ್ಲೂರ್, ಮೌಲಾಲಿ ಅನಪುರ, ಖಂಡಪ್ಪ ದಾಸನ್, ಹಣಮೇಗೌಡ ಬೀರನಕಲ್, ಶರಣಪ್ಪ ಮಾನೇಗಾರ, ಭೀಮಣ್ಣ ಮೇಟಿ, ದೇವರಾಜ ನಾಯಕ್, ವಿಜಯಕುಮಾರ ಶಿರಗೋಳ, ಭೀಮರಾಯ ಠಾಣಗುಂದಿ, ಟಿ.ಎನ್. ಭೀಮುನಾಯಕ, ಮಲ್ಲಿಕಾರ್ಜುನ ಕ್ರಾಂತಿ, ಸುರೇಶ ಬೊಮ್ಮನ್, ಮಲ್ಲಿಕಾರ್ಜುನ ಎಂ. ಈಟೆ, ಶರಣು ನಾಟೇಕಾರ, ಮರೆಪ್ಪನಾಯಕ ಮಗದಂಪುರ, ನಾಗರತ್ನ ಅನಪುರ, ಮರೆಪ್ಪ ಚಟ್ಟೆರಕರ್, ಗಣೇಶ ದುಪಲ್ಲಿ, ಹನುಮಂತ ನಾಯಕ, ಮಲ್ಲು ಮಾಳಿಕೇರಿ, ಸಂತೋಷಕುಮಾರ ನಿರ್ಮಲಕರ, ಕಾಂತು ಪಾಟೀಲ್, ರಾಘು ಮಾನ್ಸಗಲ್, ನಾಗರಾಜ ಮಾನ್ಸಗಲ್, ಶರಣಪ್ಪ ಜಾಕನಳ್ಳಿ ಹಾಗೂ ವಿವಿಧ ಸಂಘ-ಸಂಸ್ಥೆ, ವಿವಿಧ ಪ್ರಗತಿಪರ ಚಿಂತಕರು ಭಾಗಿಯಾಗಿದ್ದರು.