Advertisement

ಕಸ ವಿಲೇವಾರಿ ಆದೇಶ ರದ್ದತಿಗೆ ಆಗ್ರಹಿಸಿ ಮನವಿ

06:59 AM Jan 29, 2019 | Team Udayavani |

ದಾವಣಗೆರೆ: ಕಸ ವಿಲೇವಾರಿಯನ್ನ ಖಾಸಗಿಯವರಿಗೆ ವಹಿಸಿರುವುದನ್ನ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ 5,6,7,12,13,14 ಮತ್ತು 15ನೇ ವಾರ್ಡ್‌ ವ್ಯಾಪ್ತಿಯ ವಾಣಿಜ್ಯ ಮಳಿಗೆ ಮಾಲಿಕರು, ವರ್ತಕರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿ ತಿಂಗಳು ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ 30 ರೂಪಾಯಿ ಪಾವತಿ ಮಾಡಲಾಗುತ್ತದೆ. ಅಲ್ಲದೆ ಪ್ರತಿ ವರ್ಷವೂ ಸ್ವಯಂ ಘೋಷಿತ ಕಂದಾಯ ಪಾವತಿಸುವ ಕಲಂ 21ರಲ್ಲಿ ನಮೂದಿಸಿರುವಂತೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ-1976 ಅನುಸೂಚಿ-3 ಕಲಂ 19ರ ಅನ್ವಯ ಕಟ್ಟಡಗಳ ಘನ ತ್ಯಾಜ್ಯ ನಿರ್ವಹಣಾ ಉಪಕರ ಸೇರಿ ಕಂದಾಯ ಕಟ್ಟಲಾಗುತ್ತಿದೆ. ಇಷ್ಟಾದರೂ ಖಾಸಗಿಯವರಿಗೆ ತ್ಯಾಜ್ಯ ವಿಲೇವಾರಿಗೆ ನಗರಪಾಲಿಕೆ ಕಾರ್ಯಾದೇಶ ನೀಡಿರುವುದು ಸರಿಯಲ್ಲ ಎಂದು ವರ್ತಕರು, ಮಾಲಿಕರು ತಿಳಿಸಿದರು.

ತ್ಯಾಜ್ಯ ವಿಲೇವಾರಿ ವಹಿಸಿಕೊಂಡಿರುವರು ವಾಣಿಜ್ಯ ಮಳಿಗೆ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌, ಚಿತ್ರಮಂದಿರದ ವಿಸ್ತೀರ್ಣದ ಆಧಾರದಲ್ಲಿ ಪ್ರತಿ ತಿಂಗಳು 400, 750, 800 ಮತ್ತು 1,500 ರೂಪಾಯಿ ದರ ನಿಗದಿಪಡಿಸಿರುವುದು ಅತ್ಯಂತ ಅವೈಜ್ಞಾನಿಕ ಮತ್ತು ಕಾನೂನುಬಾಹಿರ, ಅಸಂವಿಧಾನಾತ್ಮಕ ಎಂದು ದೂರಿದರು.

ಕೂಡಲೇ ಕಾನೂನುಬಾಹಿರ ಆದೇಶವನ್ನ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ, ಆದೇಶದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ವರ್ತಕರಾದ ಜಿ.ಎನ್‌. ಪ್ರಕಾಶ್‌, ರೂಪೇಶ್‌, ದೀಪಕ್‌, ಕೆ.ಬಿ. ಪ್ರಕಾಶ್‌, ತೇಜಸ್‌, ಜಯಂತಿಲಾಲ್‌, ಕಂಠಣ್ಣ, ಲಕ್ಷ್ಮಿ ನಾರಾಯಣ, ರಾಜು, ರಘು, ಮಂಜುನಾಥ್‌, ಶ್ರೀನಿವಾಸ್‌, ರಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next